ಜಂಗಲ್‌ ರಾಜ್‌ನಲ್ಲಿ ಮಹಿಳೆಯಾಗಿರುವುದೇ ಅಪರಾಧ: ಪ್ರಿಯಾಂಕಾ ಕಿಡಿ ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಉಲ್ಲೇಖಿಸಿ, ಉತ್ತರಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಜಂಗಲ್‌ ರಾಜ್‌ನಲ್ಲಿ ಮಹಿಳೆಯಾಗಿರುವುದೇ ಅಪರಾಧ’ ಎಂದು ಗುರುವಾರ ಹೇಳಿದರು. ‘ಕಾನ್ಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಇಬ್ಬರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅವರಲ್ಲೊಬ್ಬರ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು. ‘ರಾಜಿ ಮಾಡಿಕೊಳ್ಳಲು ಸಂತ್ರಸ್ತೆಯರ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಆರೋಪವು ಕೇಳಿ ಬಂದಿದೆ’ ಎಂದು ಅವರು ಎಕ್ಸ್‌ ಮಾಧ್ಯಮದಲ್ಲಿ ವಿವರಿಸಿದ್ದಾರೆ. ‘ಉತ್ತರಪ್ರದೇಶದಲ್ಲಿ ಸಂತ್ರಸ್ತ ಹೆಣ್ಮಕ್ಕಳು ನ್ಯಾಯ ಕೇಳಿದರೆ, ಅವರ ಕುಟುಂಬವನ್ನು ನಾಶ ಮಾಡುವುದು ರೂಢಿಯಾಗಿದೆ. ಉನ್ನಾವೊ, ಹತ್ರಾಸ್‌ನಿಂದ ಕಾನ್ಪುರ ಪ್ರಕರಣದವರೆಗೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ ಮತ್ತು ಅವರ ಕುಟುಂಬವನ್ನು ನಾಶ ಮಾಡಲಾಗಿದೆ’ ಎಂದಿದ್ದಾರೆ. ‘ರಾಜ್ಯದ ಕೋಟ್ಯಂತರ ಮಹಿಳೆಯರು ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು’ ಎಂದೂ ಅವರು ಪ್ರಶ್ನಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.