ಲೋಕಸಭಾ ಚುನಾವಣೆ | ಬಿಜೆಪಿ ಜತೆ ಟಿಡಿಪಿ, ಜನಸೇನಾ ಮೈತ್ರಿ: ರವೀಂದ್ರ ಕುಮಾರ್‌ ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ, ಜನಸೇನಾ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿವೆ ಎಂದು ಟಿಡಿಪಿ ಹಿರಿಯ ನಾಯಕ, ಸಂಸದ ಕೆ. ರವೀಂದ್ರ ಕುಮಾರ್‌ ತಿಳಿಸಿದ್ದಾರೆ. ‘ಟಿಡಿಪಿ ಅಧ್ಯಕ್ಷ ಎನ್‌. ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆಂಧ್ರಪ್ರದೇಶದಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆ ನಡೆಯಲಿದೆ. ಮೈತ್ರಿ ಕುರಿತು ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗಿದೆ’ ಎಂದು ಕುಮಾರ್‌ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಒಟ್ಟಾಗಿ ಕೆಲಸ ಮಾಡಲು ತಾತ್ವಿಕವಾಗಿ ನಿರ್ಧರಿಸಿವೆ ಎಂದು ಅವರು ಹೇಳಿದ್ದಾರೆ. ಗುರುವಾರ ರಾತ್ರಿ ಗೃಹ ಸಚಿವ ಅಮಿತ್‌ ಶಾ ಅವರ ನಿವಾಸದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ ಜನಸೇನಾ ನಾಯಕ, ನಟ ಪವನ್‌ ಕಲ್ಯಾಣ್‌ ಅವರು ಕೂಡ ಭಾಗಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ. ಆಂಧ್ರಪ್ರದೇಶವು ಒಟ್ಟು 25 ಲೋಕಸಭಾ ಕ್ಷೇತ್ರಗಳು ಹಾಗೂ 175 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಪಡೆಯಲಿದೆ ಎಂಬುದನ್ನು ಸೀಟು ಹಂಚಿಕೆ ಮಾತುಕತೆಯ ಮೂಲಕ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ಹೇಳಿವೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮತ್ತು ಸಿದ್ಧತೆಗಳನ್ನು ಅಂತಿಮಗೊಳಿಸಲು ಮೂರು ಪಕ್ಷಗಳ ಹಿರಿಯ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.