ಭಾರತದಲ್ಲಿ ಮುಂದಿನ 15 ವರ್ಷ ಸ್ಥಿರ ಸರ್ಕಾರ ಇರಲಿದೆ: ವಿದೇಶಾಂಗ ಸಚಿವ ಜೈಶಂಕರ್ ಟೊಕಿಯೊ: ಭಾರತವು ಮುಂದಿನ 15 ವರ್ಷಗಳ ವರೆಗೆ ಸ್ಥಿರ ಸರ್ಕಾರವನ್ನು ಹೊಂದಿರಲಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದು, ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದೀರ್ಘಕಾಲದವರೆಗೆ ಸ್ಥಿರ ಸರ್ಕಾರ ಅಸ್ಥಿತ್ವದಲ್ಲಿರುವುದು ಮುಖ್ಯ ಎಂದು ಒತ್ತಿ ಹೇಳಿದ್ದಾರೆ. ಭಾರತ ಹಾಗೂ ಜಪಾನ್‌ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಕುರಿತ 'ನಿಕ್ಕೀ ವೇದಿಕೆ'ಯಲ್ಲಿ ಮಾತನಾಡಿದ ಜೈಶಂಕರ್‌, ಸುಧಾರಣಾವಾದಿ ಹಾಗೂ ದೂರದೃಷ್ಟಿಯುಳ್ಳ ನಾಯಕತ್ವಕ್ಕೆ ಬಲವಾದ ರಾಜಕೀಯ ಜನಾದೇಶದ ಬೆಂಬಲವಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿನಲ್ಲಿ ಬಹುಮತ ಹೊಂದಿರುವುದು, ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಕಾರಣವಾಗಲಿದೆ ಎಂದಿದ್ದಾರೆ. ‌ಭಾರತದಲ್ಲಿನ ರಾಜಕೀಯ ಸ್ಥಿರತೆ ಹಾಗೂ ಮುಂಬರುವ ಲೋಕಸಭೆ ಚುನಾವಣೆಯು ದೇಶದ ವಿದೇಶಾಂಗ ನೀತಿಗಳ ಮೇಲೆ ಪರಿಣಾಮ ಉಂಟುಮಾಡಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. 'ನೂರಕ್ಕೆ ನೂರರಷ್ಟು ನಾವು ಮುಂದಿನ 15 ವರ್ಷಗಳ ವರೆಗೆ ಸ್ಥಿರ ಸರ್ಕಾರ ಹೊಂದಿರುತ್ತೇವೆ. ಅದು 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ವರೆಗೂ ಮುಂದುವರಿಯಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಪ್ರತಿಯೊಂದು ದೇಶವೂ, ಪ್ರತಿಯೊಂದು ಸಮಾಜವೂ ವಿಭಿನ್ನವಾಗಿರುತ್ತವೆ. ಹಾಗಾಗಿ, ಭಾರತಕ್ಕೆ ಅನ್ವಯವಾಗುವ ಅಂಶಗಳನ್ನು ಇತರ ರಾಷ್ಟ್ರಗಳಿಗೂ ಅನ್ವಯಿಸಬಹುದು ಎನ್ನಲಾಗದು. ಆದರೆ, ರಾಜಕೀಯದಲ್ಲಿ ಸ್ಥಿರತೆ ಸಾಧಿಸುವುದರಿಂದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ ಎಂಬುದು ನಮಗೆ ಅರಿವಾಗಿದೆ. ಸಂಸತ್ತಿನಲ್ಲಿ ಬಹುಮತವಿಲ್ಲದಿದ್ದರೆ ಬಹಳ ದೊಡ್ಡ ವ್ಯತ್ಯಾಸ ಉಂಟಾಗುತ್ತದೆ' ಎಂದು ವಿವರಿಸಿದ್ದಾರೆ. 'ಸುಧಾರಣಾವಾದಿ, ದೂರದೃಷ್ಟಿ ಹಾಗೂ ಬದ್ಧತೆಯುಳ್ಳ ನಾಯಕತ್ವವನ್ನು ಹೊಂದಿದ್ದು, ಆ ನಾಯಕತ್ವಕ್ಕೆ ರಾಜಕೀಯ ಜನಾದೇಶದ ಬೆಂಬಲ ಮತ್ತು ಸಂಸತ್ತಿನಲ್ಲಿ ಬಹುಮತ ಇದ್ದರೆ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ನಿಜವಾಗಿಯೂ ಉತ್ತಮ ಸಂಯೋಜನೆಯಾಗಿರುತ್ತದೆ. ಹಲವು ಸಂದರ್ಭಗಳಲ್ಲಿ ದೂರದೃಷ್ಟಿಯಿದ್ದರೆ, ಬಹುಮತ ಇರುವುದಿಲ್ಲ. ಬಹುಮತವಿದ್ದರೆ, ದೂರದೃಷ್ಟಿ ಇರುವುದಿಲ್ಲ. ಹಾಗಾಗಿ ಎರಡೂ ಮುಖ್ಯವಾಗುತ್ತವೆ' ಎಂದು ಪ್ರತಿಪಾದಿಸಿದ್ದಾರೆ. ಮುಂದುವರಿದು, 'ನಮ್ಮ ವಿಚಾರಕ್ಕೆ ಬಂದರೆ, ಖಂಡಿತವಾಗಿಯೂ ನಾವು ಕಳೆದ 10 ವರ್ಷಗಳಲ್ಲಿ ಎರಡನ್ನೂ ಹೊಂದಿದ್ದೆವು. ಅದನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದೇವೆ. ಯಾವುದೇ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಕಷ್ಟು ವರ್ಷಗಳವರೆಗೆ ಚರ್ಚೆ ನಡೆಯುತ್ತಿದ್ದದ್ದನ್ನು ನಾವೆಲ್ಲ ಕಂಡಿದ್ದೇವೆ. ಆದರೆ, ನಮ್ಮ ಸರ್ಕಾರವು ದೃಢ ನಿರ್ಧಾರಗಳನ್ನು ತ್ವರಿತಗತಿಯಲ್ಲಿ ತೆಗೆದುಕೊಳ್ಳುವ ಸಾಮರ್ಥ್ಯ ಇರುವುದನ್ನು ನೀವೆಲ್ಲರೂ ಗಮನಿಸಿದ್ದೀರಿ' ಎಂದು ಹೇಳಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.