2024 | ಎಎಪಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಎಎಪಿ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಪಕ್ಷದ ಪ್ರಚಾರ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿದರು. ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರ ಸಮ್ಮುಖದಲ್ಲಿ, ‘ಸಂಸದ್‌ ಮೇ ಭಿ ಕೇಜ್ರಿವಾಲ್ ತೊ ದಿಲ್ಲಿ ಹೋಗಿ ಔರ್‌ ಖುಷ್‌ ಹಾಲ್‌’ (ಸಂಸತ್ತಿನಲ್ಲಿಯೂ ಕೇಜ್ರಿವಾಲ್‌ ಇದ್ದರೆ, ದಿಲ್ಲಿಗೆ ಮತ್ತಷ್ಟು ಸಮೃದ್ಧಿ ಬರುವುದು) ಎಂಬ ಘೋಷವಾಕ್ಯದೊಂದಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಕೇಜ್ರಿವಾಲ್‌, ‘ನನ್ನ ಕುಟುಂಬದಂತಿರುವ ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ಎಲ್ಲಾ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದರು. ದೆಹಲಿ ಮತ್ತು ಪಂಜಾಬ್‌ ಎರಡು ಕಡೆಗಳಲ್ಲಿ ಎಎಪಿ ಆಡಳಿತವಿದೆ. ಇಲ್ಲಿ ಮಾತ್ರ ಉಚಿತ ವಿದ್ಯುತ್‌ ಪೂರೈಕೆ ಇದೆ ಎಂದು ತಿಳಿಸಿದರು. ‘ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ಮೂಲಕ ಎಎಪಿ ಸರ್ಕಾರದ ಪ್ರತಿ ಅಭಿವೃದ್ಧಿ ಕಾರ್ಯಕ್ಕೂ ಅಡ್ಡಿಯಾಗಿದೆ. ಎಎಪಿಯ ಎಲ್ಲ ಸಂಸದರನ್ನು ಗೆಲ್ಲಿಸಿ ನಮಗೆ ಶಕ್ತಿ ನೀಡಿ’ ಎಂದು ಮನವಿ ಮಾಡಿದರು. ‘ದೆಹಲಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಅಧಿಕಾರ ನೀಡಿದ್ದಕ್ಕಾಗಿ ಅವರು ನಿಮ್ಮನ್ನು ದ್ವೇಷಿಸುತ್ತಾರೆ. ಅದಕ್ಕಾಗಿ ಮೊಹಲ್ಲಾ ಕ್ಲಿನಿಕ್‌ಗಳನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಿದರು. ಮನೆಮನೆಗೆ ಪಡಿತರ ಅಕ್ಕಿ ತಲುಪಿಸುವ ಯೋಜನೆಯನ್ನು ನಿಲ್ಲಿಸಿದರು’ ಎಂದು ಆರೋಪಿಸಿದರು. ದೆಹಲಿಯ ಏಳು ಸಂಸತ್ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಎಎಪಿ ಮತ್ತು ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸರ್ಧಿಸಲಿದೆ. ಪಂಜಾಬ್‌ನಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.