ರಾಜಸ್ಥಾನ: ಹಲವು ‘ಕೈ’ ಮುಖಂಡರು ಬಿಜೆಪಿಯತ್ತ ಜೈಪುರ: ರಾಜಸ್ಥಾನದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳಲು ಸನ್ನದ್ಧರಾಗಿದ್ದು, ಪಕ್ಷವು ಸಂದಿಗ್ಧತೆಗೆ ಸಿಲುಕಿದೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್‌ನ ಮಾಜಿ ಸಚಿವರಾದ ಲಾಲ್‌ಚಂದ್‌ ಕಟಾರಿಯಾ, ರಾಜೇಂದ್ರ ಯಾದವ್‌, ಮಾಜಿ ಶಾಸಕರಾದ ರಿಚ್ಪಾಲ್‌ ಮಿರ್ಧಾ, ವಿಜಯ್‌ಪಾಲ್‌ ಮಿರ್ಧಾ, ಖಿಲಾಡಿಲಾಲ್‌ ಭೈರವ, ಅಲೋಕ್‌ ಬೇನಿವಾಲ್‌, ಮುಖಂಡರಾದ ರಾಮ್‌ಗೋಪಾಲ್‌ ಶರ್ಮಾ ಅವರು ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಭಾನುವಾರ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿವೆ. ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಲಾಲ್‌ಚಂದ್‌ ಅವರು ನಿರಾಕರಿಸಿದ್ದರು. ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯಲಿದ್ದಾರೆ ಎಂಬ ವದಂತಿಗಳು ಕೂಡ ಹರಿದಾಡಿದ್ದವು. ವಿಜಯ್‌ಪಾಲ್‌ ಅವರು ವಿಧಾನಸಭಾ ಚುನಾವಣೆಗೆ ದೇಗಾನಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ರಿಚ್‌ಪಾಲ್‌ ಅವರು ಈಚೆಗೆ ಬಿಜೆಪಿ ಪರವಾಗಿ ಹೇಳಿಕೆಗಳನ್ನು ನೀಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.