ಕಾಂಗ್ರೆಸ್‌ ಸೇರಿದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್‌ ಚಂಡೀಗಢ/ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಹರಿಯಾಣದ ಹಿಸಾರ್‌ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿ, ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರ ತಂದೆ, ಕೇಂದ್ರದ ಮಾಜಿ ಸಚಿವ ಬಿರೇಂದರ್‌ ಸಿಂಗ್‌ ಅವರೂ ಕಾಂಗ್ರೆಸ್‌ಗೆ ಮರಳಲು ಸಿದ್ಧರಾಗಿದ್ದಾರೆ. ರಾಜೀನಾಮೆ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ ಬಳಿಕ ಬ್ರಿಜೇಂದ್ರ ಅವರು ನವದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗಿ ಕಾಂಗ್ರೆಸ್‌ ಸೇರಿದರು. ಈ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಜಯ್‌ ಮಾಕನ್‌, ಮುಕುಲ್‌ ವಾಸ್ನಿಕ್‌, ದೀಪಕ್‌ ಬಬಾರಿಯಾ ಉಪಸ್ಥಿತರಿದ್ದರು. ‘ರಾಜಕೀಯ ಕಾರಣಗಳಿಗಾಗಿ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಹಿಸಾರ್‌ನ ಕ್ಷೇತ್ರದ ಸದಸ್ಯನಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಬಿಜೆಪಿಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ಹಿಸಾರ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬ್ರಿಜೇಂದ್ರ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ‘ನಾನು ಆ ಪಕ್ಷದಲ್ಲಿ ಸಂತೋಷವಾಗಿ ಇರಲಿಲ್ಲ. ಅದಕ್ಕೆ ಕೆಲವು ಕಾರಣಗಳಿವೆ. ಕೆಲ ಸೈದ್ಧಾಂತಿಕ ನಿಲುವುಗಳು ಮತ್ತು ಕುಸ್ತಿಪಟುಗಳ ಪ್ರತಿಭಟನೆ ಹಾಗೂ ರೈತರ ಸಮಸ್ಯೆಗಳನ್ನು ನಿಭಾಯಿಸಿದ ರೀತಿಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಬ್ರಿಜೇಂದ್ರ ಸುದ್ದಿಗಾರರಿಗೆ ತಿಳಿಸಿದರು. ‘ಈ ಹಿಂದೆಯೇ ಜೆಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವಂತೆ ಬಿಜೆಪಿಗೆ ನಾಯಕರಿಗೆ ನಾನು ಮತ್ತು ನನ್ನ ತಂದೆ ಒತ್ತಾಯಿಸಿದ್ದೆವು. ಆದರೆ ಅದು ಆಗಲಿಲ್ಲ. ಮೈತ್ರಿಕೂಟದಲ್ಲಿ ಜೆಜೆಪಿ ಮುಂದುವರಿಕೆ ಕೂಡ ನನ್ನ ನಿರ್ಗಮನಕ್ಕೆ ಒಂದು ಕಾರಣ’ ಎಂದು ಅವರು ಪ್ರತಿಕ್ರಿಯಿಸಿದರು. ಬಿರೇಂದರ್‌ ಸಿಂಗ್‌ ಅವರು ಕಾಂಗ್ರೆಸ್‌ ಸೇರಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಜಾಂಚಿ ಅಜಯ್‌ ಮಾಕನ್‌ ಅವರು, ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ಸೇರುವುದಾಗಿ ಅವರು ಹೇಳಿದ್ದಾರೆ ಎಂದು ತಿಳಿಸಿದರು. ಬಿರೇಂದರ್‌ ಸಿಂಗ್‌ ಅವರು 42 ವರ್ಷಗಳವರೆಗೆ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ್ದವರು. 2014ರಲ್ಲಿ ಬಿಜೆಪಿ ಸೇರಿದ್ದರು. ಶಾಸಕ, ರಾಜ್ಯಸಭಾ ಸದಸ್ಯರಾಗಿದ್ದ ಬಿರೇಂದರ್‌ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಟಿಕೆಟ್‌ ವಂಚಿತರಾಗಿರುವ ರಾಜಸ್ಥಾನದ ಮತ್ತೊಬ್ಬ ಬಿಜೆಪಿ ಸಂಸದ ರಾಹುಲ್‌ ಕಸ್ವಾನ್‌ ಅವರನ್ನೂ ಕಾಂಗ್ರೆಸ್‌ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.