ದೇವಸ್ಥಾನದ ಒಂದು ನಿಂಬೆಹಣ್ಣು ₹35 ಸಾವಿರಕ್ಕೆ ಹರಾಜು! ಈರೋಡ್‌, ತಮಿಳುನಾಡು: ಈರೋಡ್‌ ಬಳಿಯ ಗ್ರಾಮವೊಂದರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ ವೇಳೆ ನಡೆದ ಹರಾಜಿನಲ್ಲಿ ಒಂದು ನಿಂಬೆಹಣ್ಣು ₹35 ಸಾವಿರಕ್ಕೆ ಹರಾಜಾಗಿದೆ. ಶಿವಗಿರಿ ಗ್ರಾಮದ ಪಾಯಪೂಸಿಯನ್‌ ದೇವಸ್ಥಾನದಲ್ಲಿ ಎಂದಿನ ಪದ್ಧತಿಯಂತೆ ಶಿವನಿಗೆ ಅರ್ಪಿಸಿದ್ದ ನಿಂಬೆ ಹಣ್ಣು ಮತ್ತಿತರ ಹಣ್ಣುಗಳನ್ನು ಹರಾಜಿಗಿಡಲಾಗಿತ್ತು. ಸುಮಾರು 15 ಮಂದಿ ಭಕ್ತರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಈರೋಡ್‌ನ ಭಕ್ತರೊಬ್ಬರು ₹35 ಸಾವಿರಕ್ಕೆ ಒಂದು ನಿಂಬೆಹಣ್ಣನ್ನು ಕೊಂಡರು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇವರಿಗೆ ಅರ್ಪಿಸಿರುವ ನಿಂಬೆಹಣ್ಣನ್ನು ಅತಿಹೆಚ್ಚು ಮೊತ್ತ ನೀಡಿ ಪಡೆದವರಿಗೆ ಐಶ್ವರ್ಯ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.