ಡ್ರಗ್ಸ್– ಜಾಫರ್‌ ಸಾದಿಕ್‌ ಬಂಧನ:ತಮಿಳುನಾಡು ರಾಜ್ಯಪಾಲರ ಭೇಟಿ ಮಾಡಿದ ಪಳನಿಸ್ವಾಮಿ ಚೆನ್ನೈ: ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ದಂಧೆಯ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಜಾಫರ್‌ ಸಾದಿಕ್‌ ಅವರ ವಿರುದ್ಧ ಕೂಲಂಕಷ ತನಿಖೆ ನಡೆಸುವಂತೆ ಕೋರಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅವರಿಗೆ ಭಾನುವಾರ ಮನವಿಪತ್ರ ಸಲ್ಲಿಸಿದರು. ಡಿಎಂಕೆ ಮಾಜಿ ಪದಾಧಿಕಾರಿ ಸಾದಿಕ್‌ ಅವರನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆಯು (ಎನ್‌ಸಿಬಿ) ಮಾರ್ಚ್‌ 9ರಂದು ದೆಹಲಿಯಲ್ಲಿ ಬಂಧಿಸಿದೆ. ಅದಾದ ಮರುದಿನವೇ ಪಳನಿಸ್ವಾಮಿ ಅವರ ನೇತೃತ್ವದ ಎಐಎಡಿಎಂಕೆ ನಿಯೋಗ ರಾಜ್ಯಪಾಲರನ್ನು ಭೇಟಿ ಆಗಿದೆ. ರಾಜ್ಯ ಪೊಲೀಸರು ಮತ್ತು ಡಿಎಂಕೆ ಜೊತೆ ಸಾದಿಕ್‌ ಹೊಂದಿರುವ ನಂಟಿನ ಕುರಿತು ಸಮರ್ಪಕ ತನಿಖೆ ನಡೆಸಬೇಕು ಎಂದು ಅವರು ಈ ವೇಳೆ ಕೇಳಿಕೊಂಡಿದ್ದಾರೆ. ಡಿಎಂಕೆ ಪದಾಧಿಕಾರಿಗಳಿಗೆ ಹಣ ನೀಡಿದ್ದಾರೆ, ಪಕ್ಷದ ನಾಯಕನಿಗೆ ಸಂಬಂಧಿಸಿದ ಟ್ರಸ್ಟ್‌ ಒಂದಕ್ಕೆ ದೇಣಿಗೆ ನೀಡಿದ್ದಾರೆ, ಡಿಎಂಕೆ ಕುಟುಂಬದ ಪ್ರಮುಖ ವ್ಯಕ್ತಿಯೊಬ್ಬರು ನಿರ್ದೇಶಿಸಿದ್ದ ಚಿತ್ರದಲ್ಲಿ ಹಣ ಹೂಡಿದ್ದಾರೆ ಎಂಬ ಆರೋಪಗಳು ಸಾದಿಕ್‌ ಮೇಲಿವೆ. ಈ ಎಲ್ಲಾ ಆರೋಪಗಳ ಕುರಿತೂ ತನಿಖೆ ನಡೆಯಬೇಕು. ಅಲ್ಲದೇ, ನಗರ ವ್ಯಾಪ್ತಿಯಲ್ಲಿ ಅಳವಡಿಸಲು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಸಾದಿಕ್‌ ಒದಗಿಸಿದ್ದ ಕುರಿತು ಪೊಲೀಸರು ಈ ಹಿಂದೆ ಶ್ಲಾಘಿಸಿದ್ದರು. ಯಾವಾಗ ಸಾದಿಕ್‌ ಎನ್‌ಸಿಬಿ ಕಣ್ಣಿಗೆ ಬಿದ್ದರೋ ಆಗ ಅವರು ನೀಡಿದ್ದ ಕ್ಯಾಮೆರಾಗಳನ್ನು ತೆರವುಗೊಳಿಸಿ, ಬೇರೆ ಕ್ಯಾಮೆರಾಗಳನ್ನು ಅಳವಡಿಸಿದರು ಎಂದು ದೂರಿದ್ದಾರೆ. ‌ ರಾಜ್ಯದಲ್ಲಿ ಮಾದಕವಸ್ತು ದೊರಕದಂತೆ ಮಾಡುವ ನಿಟ್ಟಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಾದಿಕ್‌ ವಿಚಾರದಲ್ಲಿ ನೈತಿಕ ಹೊಣೆಹೊತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮತ್ತು ಅವರ ಮಗ ಉದಯನಿಧಿ ಸ್ಟಾಲಿನ್‌ ಅವರು ರಾಜೀನಾಮೆ ನೀಡಬೇಕು ಎಂದು ಜನರು ನಿರೀಕ್ಷಿಸುತ್ತಿದ್ದಾರೆ ಎಂದು ರಾಜ್ಯಪಾಲರ ಭೇಟಿ ಬಳಿಕ ಪಳನಿಸ್ವಾಮಿ ಅವರು ಸುದ್ದಿದಾರರಿಗೆ ಹೇಳಿದ್ದಾರೆ. ಡಿಎಂಕೆಯ ಅನಿವಾಸಿ ಘಟಕ ‘ಚೆನ್ನೈ ವೆಸ್ಟ್‌’ನ ಉಪ ಆಯೋಜಕರಾಗಿದ್ದ ಸಾದಿಕ್‌ ಅವರ ಹೆಸರು ಮಾದಕವಸ್ತು ದಂದೆಯಲ್ಲಿ ಕೇಳಿಬಂದ ಬಳಿಕ, ಅವರನ್ನು ಈಚೆಗಷ್ಟೇ ಡಿಎಂಕೆ ಉಚ್ಚಾಟಿಸಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.