ನಿರೀಕ್ಷಣಾ ಜಾಮೀನು: ಶಾಜಹಾನ್‌ ಅರ್ಜಿ ತಿರಸ್ಕರಿಸಿದ ಕಲ್ಕತ್ತ ಹೈಕೋರ್ಟ್‌ ಕೋಲ್ಕತ್ತ: ಪಡಿತರವನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಹಗರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಾಜಹಾನ್‌ ಶೇಖ್‌ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ. ಇ.ಡಿ ಪರ ವಾದ ಮಂಡಿಸಿದ ವಕೀಲರು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ನಂತರ, ನ್ಯಾಯಮೂರ್ತಿ ದೇವಾಂಗ್ಶು ಬಸಾಕ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಶೇಖ್‌ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಜಹಾನ್‌ ಶೇಖ್‌, ಈ ಹಗರಣದಲ್ಲಿ ಪ್ರಮುಖ ಆರೋಪಿ. ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. ಹಗರಣಕ್ಕೆ ಸಂಬಂಧಿಸಿ, ಇ.ಡಿ ಈಗಾಗಲೇ ಮಾಜಿ ಸಚಿವ ಜ್ಯೋತಿಪ್ರಿಯ ಮಲಿಕ್‌ ಅವರನ್ನು ಬಂಧಿಸಿದೆ. ಮಲಿಕ್‌ ಅವರು 2011ರಿಂದ 2021ರ ವರೆಗೆ ಆಹಾರ ಪೂರೈಕೆ ಸಚಿವರಾಗಿದ್ದರು. ಜನವರಿ 5ರಂದು ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶೇಖ್‌, ಸದ್ಯ ಸಿಬಿಐ ವಶದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.