ಪೌರತ್ವ ತಿದ್ದುಪಡಿ ಕಾಯ್ದೆ: ಆನ್‌ಲೈನ್‌ ಪೋರ್ಟಲ್‌ ಆರಂಭ ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಗೃಹ ಸಚಿವಾಲಯ ಮಂಗಳವಾರ ಪೋರ್ಟಲ್‌ ಆರಂಭಿಸಿದೆ. ಅಲ್ಲದೆ ಈ ಕುರಿತು ಶೀಘ್ರದಲ್ಲಿಯೇ ‘ಸಿಎಎ–2019’ ಮೊಬೈಲ್‌ ಆ್ಯಪ್‌ ಅನ್ನು ಸರ್ಕಾರ ಪ್ರಾರಂಭಿಸಲಿದೆ. ಅರ್ಜಿಗಳ ಪ್ರಕ್ರಿಯೆ ಮತ್ತು ಇತರ ಸಮಸ್ಯೆಗಳ ಕುರಿತು ವಿವರಿಸಲು ಪೋರ್ಟಲ್‌ನಲ್ಲಿ ಎಫ್‌ಎಕ್ಯೂಗಳನ್ನೂ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ಒದಗಿಸಲಾಗಿದೆ. ಸಿಎಎ–2019ರ ಪ್ರಕಾರ 2014ರ ಡಿಸೆಂಬರ್‌ 31ಕ್ಕೂ ಮೊದಲು ಅಫ್ಗಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತ ಸಮುದಾಯಗಳಿಗೆ ಸೇರಿದವರು ಅರ್ಜಿ ಸಲ್ಲಿಸಲು ಅರ್ಹರು. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎಫ್‌ಎಕ್ಯೂ ಪ್ರಕಾರ, ಅರ್ಜಿದಾರರು ಜಿಲ್ಲಾ ಮಟ್ಟದ ಸಮಿತಿ (ಡಿಎಲ್‌ಸಿ) ಮೂಲಕ ಉನ್ನತಾಧಿಕಾರ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ₹50 ಅನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಅಲ್ಲದೆ ಆರು ಬಗೆಯ ದಾಖಲೆಗಳನ್ನು ಒದಗಿಸಬೇಕು. ಜತೆಗೆ ತಾವು ಭಾರತ ಪ್ರವೇಶಿಸಿದ ನಿರ್ದಿಷ್ಟ ದಿನಾಂಕವನ್ನು ನಮೂದಿಸಬೇಕು. ಸಲ್ಲಿಕೆಯಾದ ಅರ್ಜಿ ಮತ್ತು ದಾಖಲೆಗಳನ್ನು ಡಿಎಲ್‌ಸಿ ಪರಿಶೀಲಿಸುತ್ತದೆ. ನಂತರ ಹಂತದಲ್ಲಿ ಪರಮಾರ್ಶೆಗಾಗಿ ಮೂಲ ದಾಖಲೆಗಳನ್ನು ಹಾಜರುಪಡಿಸಲು ಅರ್ಜಿದಾರರಿಗೆ ತಿಳಿಸುತ್ತದೆ. ಎಲ್ಲ ದಾಖಲೆಗಳು ಕ್ರಮಬದ್ಧವಾಗಿವೆ ಎಂದು ಕಂಡುಬಂದರೆ, ನಿರ್ದಿಷ್ಟ ಅಧಿಕಾರಿಯು ಅರ್ಹ ಅರ್ಜಿದಾರರಿಗೆ ‘ಪೌರತ್ವಕ್ಕೆ ಸಂಬಂಧಿಸಿದಂತೆ ತಾವು ನಿಷ್ಠರಾಗಿರುತ್ತೇವೆ’ ಎಂದು ಬೋಧಿಸುತ್ತಾರೆ. ದಾಖಲೆಗಳಲ್ಲಿ ಲೋಪಗಳೇನಾದರೂ ಕಂಡುಬಂದಲ್ಲಿ, ಆ ಕುರಿತು ಅರ್ಜಿದಾರರನ್ನು ಡಿಎಲ್‌ಸಿ ಪ್ರಶ್ನಿಸುತ್ತದೆ. ಅರ್ಜಿದಾರರು ಸಮಂಜಸ ಕಾರಣವಿಲ್ಲದೆ ಗೈರಾದರೆ, ಅವರ ಅರ್ಜಿಯನ್ನು ನಿರಾಕರಿಸುವಂತೆ ಉನ್ನತಾಧಿಕಾರ ಸಮಿತಿಗೆ ಡಿಎಲ್‌ಸಿ ತಿಳಿಸುತ್ತದೆ. ಪ್ರತಿಜ್ಞಾ ವಿಧಿ ಬೋಧನೆಯ ಬಳಿಕ ಡಿಎಲ್‌ಸಿ ಆನ್‌ಲೈನ್‌ ಮೂಲಕ ಉನ್ನತಾಧಿಕಾರ ಸಮಿತಿಗೆ ವಿಷಯ ತಿಳಿಸುತ್ತದೆ ಮತ್ತು ದಾಖಲೆಗಳನ್ನು ರವಾನಿಸುತ್ತದೆ. ಆ ಬಳಿಕ ಉನ್ನತಾಧಿಕಾರ ಸಮಿತಿಯು ಪೌರತ್ವಕ್ಕೆ ಸಂಬಂಧಿಸಿದ ಅರ್ಜಿಯನ್ನು ಪರಿಶೀಲಿಸಿ, ಅನುಮೋದಿಸುತ್ತದೆ ಅಥವಾ ತಿರಸ್ಕರಿಸುತ್ತದೆ. ಅರ್ಜಿದಾರರು ಅರ್ಜಿ ಸಲ್ಲಿಸುವ ವೇಳೆ ಸಹಿ ಮಾಡಿದ ಪ್ರತಿಯನ್ನು ನಿರ್ದಿಷ್ಟವಾಗಿ ಕೇಳದಿದ್ದರೆ, ಪೌರತ್ವದ ಡಿಜಿಟಲ್‌ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪೌರತ್ವ ಕಾಯ್ದೆಯ ಸೆಕ್ಷನ್‌ 6ಬಿ ಅಡಿಯಲ್ಲಿ ನೋಂದಣಿ ಮೂಲಕ ಪೌರತ್ವ ಪಡೆದವರು ಭಾರತ ಪ್ರವೇಶಿಸಿದ ದಿನಾಂಕದಿಂದ ಭಾರತದ ಪ್ರಜೆ ಎಂದು ಪರಿಗಣಿಸಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.