ಸಂದೇಶ್‌ಖಾಲಿ ಪ್ರಕರಣ: ಶಹಜಹಾನ್‌ ಶೇಖ್ ಆಪ್ತರಿಗೆ ಸಿಬಿಐ ಸಮನ್ಸ್‌ ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ತೃಣಮೂಲ ಕಾಂಗ್ರೆಸ್‌ನಿಂದ (ಟಿಎಂಸಿ) ಅಮಾನತುಗೊಂಡಿರುವ ಮುಖಂಡ ಶಹಜಹಾನ್‌ ಶೇಖ್‌ ಅವರ ಒಂಬತ್ತು ಮಂದಿ ಆಪ್ತರಿಗೆ ಸಿಬಿಐ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಪಡಿತರ ಹಗರಣದಲ್ಲಿ ಆರೋಪಿಯಾಗಿರುವ ಶಹಜಹಾನ್‌ ಅವರ ಮನೆಯಲ್ಲಿ ಶೋಧ ನಡೆಸಲು ತೆರಳಿದ್ದ ಇ.ಡಿ ಅಧಿಕಾರಿಗಳ ಮೇಲೆ ಜನವರಿ 5ರಂದು ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದಿದ್ದ ದಾಳಿಯಲ್ಲಿ ಈ ಒಂಬತ್ತು ಮಂದಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಸಿಬಿಐ ಶಂಕಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು. ಈ ದಾಳಿಯ ಹಿಂದೆ ಶಹಜಹಾನ್‌ ಅವರ ಪಾತ್ರವಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದೂ ವಿವರಿಸಿದರು. ಶಹಜಹಾನ್‌ ಅವರು ಸದ್ಯ ಸಿಬಿಐ ವಶದಲ್ಲಿದ್ದಾರೆ. ಅವರನ್ನು ಫೆಬ್ರುವರಿ 29 ರಂದು ಪೊಲೀಸರು ಬಂಧಿಸಿದ್ದರು. ಕೋಲ್ಕತ್ತ: ಇ.ಡಿ. ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದ ತನಿಖೆಯ ಅಂಗವಾಗಿ ಸಿಬಿಐ ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯ ಬನಗ್ರಾಮಕ್ಕೆ ಸೋಮವಾರ ಭೇಟಿ ನೀಡಿದರು. ಈ ಪ್ರಕಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಿರುವ ಬನಗ್ರಾಮ ನಗರಸಭೆಯ ಮಾಜಿ ಅಧ್ಯಕ್ಷ ಶಂಕರ್‌ ಆದ್ಯ ಅವರ ಮನೆಗೆ ಸಿಬಿಐ ಅಧಿಕಾರಿಗಳು, ವಿಧಿವಿಜ್ಞಾನ ತಜ್ಞರ ಜೊತೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ನವದೆಹಲಿ: ಇ.ಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವರ್ಗಾಯಿಸಿ, ಕಲ್ಕತ್ತ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರ ವಿರುದ್ಧ ಮಾಡಿರುವ ಕೆಲವು ಟೀಕೆಗಳನ್ನು ಮಾರ್ಚ್‌ 5ರಂದು ನೀಡಿರುವ ಆದೇಶದಿಂದ ಕೈಬಿಡುವಂತೆ ಕಲ್ಕತ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ಸೂಚಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.