ಪಂಜಾಬ್‌ಗೆ ₹8 ಸಾವಿರ ಕೋಟಿ ತಡೆಹಿಡಿದ ಕೇಂದ್ರ: ಕೇಜ್ರಿವಾಲ್ ಮೊಹಾಲಿ: ಕೇಂದ್ರ ಸರ್ಕಾರವು ಪಂಜಾಬ್‌ಗೆ ಬಿಡುಗಡೆ ಆಗಬೇಕಿದ್ದ ₹ 8 ಸಾವಿರ ಕೋಟಿಯನ್ನು ತಡೆಹಿಡಿದಿದೆ. ಇದು ದೊಡ್ಡ ಮೊತ್ತ, ಈ ಹಣದಿಂದ ಎಷ್ಟು ಶಾಲೆ, ಮೊಹಲ್ಲಾ ಕ್ಲಿನಿಕ್, ಆಸ್ಪತ್ರೆಗಳ ಅಭಿವೃದ್ಧಿ ಸಾಧ್ಯವಿತ್ತು ಎಂದು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದರು. ಲೋಕಸಭೆ ಚುನಾವಣೆಯ ಪಕ್ಷದ ಪ್ರಚಾರ ಕಾರ್ಯಕ್ಕೆ ಇಲ್ಲಿ ಚಾಲನೆ ನೀಡಿದ, ದೆಹಲಿ ಮುಖ್ಯಮಂತ್ರಿಯೂ ಆದ ಅವರು, ‘ಶಾಸಕರ ಖರೀದಿ ಮೂಲಕ ಭಗವಂತ ಮಾನ್‌ ಸರ್ಕಾರದ ಪದಚ್ಯುತಿಗೆ ಬಿಜೆಪಿ ಯತ್ನಿಸಿತ್ತು’ ಎಂದೂ ಆರೋಪಿಸಿದರು. ‘ರಾಜ್ಯದ ಎಲ್ಲ 13 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು, ಈ ಗೆಲುವು ನಮಗಾಗಿ ಅಲ್ಲ; ನಿಮ್ಮ ಮತ್ತು ನಿಮ್ಮ ಕುಟುಂಬದ ಏಳಿಗೆಗಾಗಿ. ಪಂಜಾಬ್‌ನ ಅಭಿವೃದ್ಧಿಗಾಗಿ’ ಎಂದು ಹೇಳಿದರು. ‘ಪಂಜಾಬ್‌ನ ಅಭಿವೃದ್ಧಿಗಾಗಿ ರಾಜ್ಯದ ಎಲ್ಲ 13 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. ಸಂಸತ್ತಿನಲ್ಲಿ ಪಂಜಾಬ್‌ನ ಧ್ವನಿ ಮೊಳಗಿಸಲು ಇದು ನೆರವಾಗಲಿದೆ’ ಎಂದರು. ‘ಕೇಂದ್ರ ಸರ್ಕಾರದವರು ಮತ್ತು ಪಂಜಾಬ್‌ನ ರಾಜ್ಯಪಾಲರು ಪ್ರತಿ ನಿತ್ಯವೂ ಮುಖ್ಯಮಂತ್ರಿ ಭಗವಂತ ಮಾನ್‌ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಭಗವಂತ ಮಾನ್‌ ಮಾತ್ರ ನಿಮ್ಮ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ನೀವು ಹೆಚ್ಚು ಸದಸ್ಯರನ್ನು ಗೆಲ್ಲಿಸಿದಷ್ಟೂ ಅವರ ಬಲ ಹೆಚ್ಚಾಗಲಿದೆ’ ಎಂದು ಹೇಳಿದರು. ಆಮ್‌ ಆದ್ಮಿ ಪಕ್ಷವು (ಎಎಪಿ) ವಿರೋಧಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಭಾಗವಾಗಿದೆ. ಆದರೆ, ಪಂಜಾಬ್‌ನಲ್ಲಿ ಏಕಾಂಗಿಯಾಗಿ ಲೋಕಸಭೆ ಚುನಾವಣೆ ಎದುರಿಸುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.