ಬೆಂಗಳೂರು-ಕಲಬುರಗಿ, ಮೈಸೂರು-ಚೆನ್ನೈ; 10 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ಅಹಮದಾಬಾದ್: ಬೆಂಗಳೂರು-ಕಲಬುರಗಿ, ಮೈಸೂರು-ಚೆನ್ನೈ ಸೇರಿದಂತೆ 10 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲು ಅನ್ನು ಮಂಗಳೂರಿಗೂ ವಿಸ್ತರಿಸಲು ಪ್ರಧಾನಿ ಮೋದಿ ಹಸಿರು ನಿಶಾನೆ ನೀಡಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚಾಲನೆಯೊಂದಿಗೆ ಕಲಬುರಗಿ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ. ಮತ್ತೊಂದೆಡೆ ಮೈಸೂರು-ಚೆನ್ನೈ ನಡುವೆ ಪ್ರತಿ ದಿನ ಈಗಾಗಲೇ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಇದು ಈ ಮಾದರಿಯ ಎರಡನೇ ರೈಲಾಗಿದೆ. ಮೈಸೂರಿನಿಂದ ವಿದ್ಯುತ್ ಮಾರ್ಗದ ಕಾಮಗಾರಿ ನಿಮಿತ್ತ ಸದ್ಯ ಈ ರೈಲು ಬೆಂಗಳೂರು-ಚೆನ್ನೈ ನಡುವೆ ಸಂಚರಿಸಲಿದ್ದು, ಏಪ್ರಿಲ್ 5ರಿಂದ ಮೈಸೂರಿನಿಂದ ಸೇವೆ ಆರಂಭಿಸಲಿದೆ. 10 ಹೊಸ ವಂದೇ ಭಾರತ್ ರೈಲುಗಳು ಯಾವುವು? ಅಹಮದಾಬಾದ್-ಮುಂಬೈ ಸೆಂಟ್ರಲ್ ಸಿಕಂದರಾಬಾದ್-ವಿಶಾಖಪಟ್ಟಣ ಮೈಸೂರು-ಡಾ.ಎಂಜಿಆರ್ ಸೆಂಟ್ರಲ್ (ಚೆನ್ನೈ) ಪಟ್ನಾ-ಲಖನೌ ನ್ಯೂ ಜಲ್‌ಪೈಗುರಿ-ಪಟ್ನಾ ಪುರಿ-ವಿಶಾಖಪಟ್ಟಣ ಲಖನೌ-ಡೆಹ್ರಾಡೂನ್ ಕಲಬುರಗಿ-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ರಾಂಚಿ-ವಾರಾಣಸಿ ಖಜುರಾಹೊ-ದೆಹಲಿ (ನಿಜಾಮುದ್ದೀನ್) ತಿರುವನಂತಪುರ-ಕಾಸರಗೋಡು ವಂದೇ ಭಾರತ್ ಮಂಗಳೂರಿಗೆ ವಿಸ್ತರಣೆ: ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ವಂದೇ ಭಾರತ್ ರೈಲುಗಳ ವಿಸ್ತರಣೆಗೂ ಹಸಿರು ನಿಶಾನೆ ನೀಡಿದ್ದಾರೆ. ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲು ಅನ್ನು ಮಂಗಳೂರಿಗೂ ವಿಸ್ತರಿಸಲಾಗಿದೆ. ಇದರೊಂದಿಗೆ ಅಹಮದಾಬಾದ್-ಜಾಮ್‌ನಗರ ವಂದೇ ಭಾರತ್ ಅನ್ನು ದ್ವಾರಕಾದವರೆಗೆ, ಅಜ್ಮೀರ್-ದೆಹಲಿ ಸರೈ ರೋಹಿಲ್ಲಾ ವಂದೇ ಭಾರತ್ ಅನ್ನು ಚಂಡೀಗಢದವರೆಗೆ, ಗೋರಖ್‌ಪುರ-ಲಖನೌ ವಂದೇ ಭಾರತ್ ಅನ್ನು ಪ್ರಯಾಗರಾಜ್‌ವರೆಗೆ ವಿಸ್ತರಿಸಲಾಗಿದೆ. ₹85 ಸಾವಿರ ಕೋಟಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ: ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ₹85,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.