₹85,000 ಕೋಟಿ ವೆಚ್ಚದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಅಹಮದಾಬಾದ್‌ನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶದಾದ್ಯಂತ ₹ 85000 ಕೋಟಿ ವೆಚ್ಚದ ಒಟ್ಟು 6000 ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮರಾಠವಾಡ ರೈಲ್ವೆ ಕೋಚ್ ಕಾರ್ಖಾನೆಯನ್ನು ದೇಶಕ್ಕೆ ಸಮರ್ಪಿಸಿದರು ಮತ್ತು ಮಹಾರಾಷ್ಟ್ರದ ಹಲವೆಡೆ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದರು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಹಾರಾಷ್ಟ್ರದ ವಿವಿಧೆಡೆ ಐದು ಜನೌಷಧ ಕೇಂದ್ರಗಳನ್ನು ಉದ್ಘಾಟಿಸಿದರು. ಜತೆಗೆ ಅವರು ನಾಸಿಕ್ ರಸ್ತೆ, ಅಕೋಲಾ, ಮುಂಬೈನ ಅಂಧೇರಿ, ಮತ್ತು ಬೋರೀವಲಿ ನಿಲ್ದಾಣಗಳಲ್ಲಿ ರೈಲ್ವೆ ಕೋಚ್ ರೆಸ್ಟೋರೆಂಟ್‌ಗಳನ್ನು ಉದ್ಘಾಟಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಾಠವಾಡ ರೈಲ್ವೆ ಕೋಚ್ ಕಾರ್ಖಾನೆಯು ತನ್ನ ತಾಂತ್ರಿಕ ಪಾಲುದಾರರಾದ ಕೇಂದ್ರೀಯ ರೈಲ್ವೆ ಸಹಯೋಗದೊಂದಿಗೆ ವಂದೇ ಭಾರತ್ ರೈಲುಗಳನ್ನು ಪೂರೈಸುತ್ತದೆ. ಇದು 1300 ಮಂದಿಗೆ ನೇರ ಮತ್ತು 10000ಕ್ಕೂ ಹೆಚ್ಚು ಮಂದಿಗೆ ಪರೋಕ್ಷ ಉದ್ಯೋಗ ಕಲ್ಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಗಿ ಕೃತಜ್ಞತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 10 ನೂತನ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಲಖನೌ–ಪಾಟ್ನಾ, ಲಖನೌ–ಡೆಹ್ರಾಡೂನ್, ರಾಂಚಿ–ವಾರಣಸಿ ಮಾರ್ಗಗಳು ಸೇರಿದಂತೆ ಪ್ರಧಾನಿ ಮೋದಿ ದೇಶದ ವಿವಿಧ ಮಾರ್ಗಗಳಲ್ಲಿ 10 ವಂದೇ ಭಾರತ್ ರೈಲುಗಳಿಗೆ ಮಂಗಳವಾರ ಚಾಲನೆ ನೀಡಿದರು. ಛತ್ತೀಸಗಢ: 43 ರೈಲ್ವೆ ಯೋಜನೆಗಳಿಗೆ ಚಾಲನೆ ರಾಯ್‌ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಛತ್ತೀಸಗಢದಲ್ಲಿ ₹249 ಕೋಟಿ ಮೊತ್ತದ 43 ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಬಿಲಾಸ್‌ಪುರದ ವಂದೇ ಭಾರತ್ ರೈಲು ನಿರ್ವಹಣಾ ಘಟಕ ಸ್ಥಾಪನೆ ಬಿಲಾಯಿಯ ಮೆಮು ಕಾರ್ ಶೆಡ್ ವಿಸ್ತರಣೆ ಕಾಮಗಾರಿಯೂ ಸೇರಿವೆ. ರಾಯ್‌ಪುರ ರೈಲ್ವೆ ನಿಲ್ದಾಣದಿಂದ ಛತ್ತೀಸ್‌ಗಢದ ರಾಜ್ಯಪಾಲ ವಿಶ್ವಭೂಷಣ್ ಹರಿಚಂದನ್ ಮತ್ತು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ವರ್ಚುಯಲ್ ಆಗಿ ಪ್ರಧಾನಿ ಜತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ 124 ಕೋಟಿ ವೆಚ್ಚದ 40 ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು 125 ಕೋಟಿ ವೆಚ್ಚದ ಮೂರು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಅವರು ರಾಜ್ಯದ 18 ರೈಲು ನಿಲ್ದಾಣಗಳಲ್ಲಿ 34 ಮಳಿಗೆಗಳನ್ನು ಹಲವೆಡೆ ಜನೌಷಧ ಕೇಂದ್ರಗಳನ್ನು ಉದ್ಘಾಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.