2024: ಕಾಂಗ್ರೆಸ್‌ನ 2ನೇ ಪಟ್ಟಿ; ಮಾಜಿ ಸಿ.ಎಂ ಪುತ್ರರಿಗೆ ಟಿಕೆಟ್‌ ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ 43 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಮಂಗಳವಾರ ಪ್ರಕಟಿಸಿದೆ. ಅಸ್ಸಾಂನ ಜೋರ್ಹತ್‌ನಿಂದ ಸಂಸದ ಗೌರವ್‌ ಗೊಗೊಯ್‌, ಮಧ್ಯಪ್ರದೇಶದ ಛಿಂದ್ವಾರದಿಂದ ನಕುಲ್‌ ನಾಥ್‌ ಹಾಗೂ ರಾಜಸ್ಥಾನದ ಜಲೋರ್‌ನಿಂದ ವೈಭವ್‌ ಗೆಹಲೋತ್‌ ಸ್ಪರ್ಧಿಸಲಿದ್ದಾರೆ. ಹಿರಿಯ ನಾಯಕರಾದ ಕಮಲನಾಥ್‌, ಅಶೋಕ ಗೆಹಲೋತ್‌ ಹಾಗೂ ದಿಗ್ವಿಜಯ್‌ ಸಿಂಗ್ ಅವರು ಸ್ಪರ್ಧಿಸುವ ಸಾಧ್ಯತೆ ದೂರವಾಗಿದೆ. ಸಚಿನ್ ಪೈಲಟ್‌, ಜಿತೇಂದ್ರ ಸಿಂಗ್‌ ಅವರಂತಹ ಹಿರಿಯ ನಾಯಕರು ಕಣಕ್ಕಿಳಿಯುವುದು ಅನುಮಾನ. ಛತ್ತೀಸಘಡದಿಂದ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹಾಗೂ ಮಾಜಿ ಸಚಿವ ತಾಮ್ರಧ್ವಜ ಸಾಹು ಅವರು ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೊದಲ ಪಟ್ಟಿಯಲ್ಲೇ ಈ ಇಬ್ಬರು ನಾಯಕರ ಹೆಸರನ್ನು ಪ್ರಕಟಿಸಲಾಗಿತ್ತು. ಇನ್ನಷ್ಟು ಹಿರಿಯ ನಾಯಕರನ್ನು ಉಮೇದುವಾರರನ್ನಾಗಿ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಹಿರಿಯ ನಾಯಕರು ಸ್ಪರ್ಧಿಸಲು ಹಿಂಜರಿದಿದ್ದಾರೆ. ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ರಾಜಸ್ಥಾನದ ಚುರು ಸಂಸದ ರಾಹುಲ್‌ ಕಸ್ವಾನ್‌ ಅವರನ್ನು ಹುರಿಯಾಳುವನ್ನಾಗಿ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ ಮೂವರು ಹಾಲಿ ಸಂಸದರನ್ನು ಉಮೇದುವಾರರನ್ನಾಗಿ ಘೋಷಿಸಲಾಗಿದೆ. ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಮುಂದಿನ ಸಭೆ ಇದೇ 15ರಂದು ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.