ನಮಾಜ್‌ ಘಟನೆ: ಎಸ್‌ಐ ಅಮಾನತು ಖಂಡಿಸಿ ಹಿಂದೂ ರಕ್ಷಣಾ ದಳ ಪ್ರತಿಭಟನೆ ನವದೆಹಲಿ: ಇಂದರ್‌ಲೋಕ್‌ ಪ್ರದೇಶದ ರಸ್ತೆಯೊಂದರಲ್ಲಿ ನಮಾಜ್‌ ಮಾಡುತ್ತಿದ್ದ ಕೆಲವರನ್ನು ಒದ್ದ ಸಬ್‌ ಇನ್‌ಸ್ಪೆಕ್ಟರ್‌ ಅಮಾನತುಗೊಳಿಸಿರುವುದನ್ನು ಖಂಡಿಸಿ ಹಿಂದೂ ರಕ್ಷಣಾ ದಳದ ಸದಸ್ಯರು ಮಂಗಳವಾರ ದೆಹಲಿ ಪೊಲೀಸ್‌ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಬಲಪಂಥೀಯ ಸಂಘಟನೆಯ ಹಲವಾರು ಸದಸ್ಯರು ಪ್ರತಿಭಟನೆಯ ವೇಳೆ ಹನುಮಾನ್ ಚಾಲೀಸಾ ಮತ್ತು ಜೈ ಶ್ರೀ ರಾಮ್ ಘೋಷಣೆ ಕೂಗಿದರು. ಸುಮಾರು 50-60 ಪ್ರತಿಭಟನಕಾರರನ್ನು ಬಂಧಿಸಲಾಗಿದೆ. ಮಾರ್ಚ್ 8ರಂದು ಉತ್ತರ ದೆಹಲಿಯ ಇಂದರ್‌ಲೋಕ್‌ನ ರಸ್ತೆಯೊಂದರಲ್ಲಿ ಸಬ್ ಇನ್‌ಸ್ಪೆಕ್ಟರ್‌ ಮನೋಜ್ ಕುಮಾರ್ ತೋಮರ್ ಅವರು ನಮಾಜ್ ಮಾಡುತ್ತಿದ್ದ ಕೆಲವರನ್ನು ತಳ್ಳಿ ಒದ್ದಿದ್ದರು. ಇದನ್ನು ಖಂಡಿಸಿ ನೂರಾರು ಮಂದಿ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲು ಕಾರಣವಾಯಿತು. ತಪ್ಪಿತಸ್ಥ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿತ್ತು. ‘ರಸ್ತೆಗಳಲ್ಲಿ ನಮಾಜ್ ಮಾಡುವ ಹಕ್ಕು ಅವರಿಗೆ ಇದ್ದರೆ, ರಸ್ತೆಗಳಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುವ ಹಕ್ಕು ನಮಗೂ ಇದೆ. ಸಬ್ ಇನ್‌ಸ್ಪೆಕ್ಟರ್‌ ಅವರನ್ನು ಪುನಃ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು ಮತ್ತು ಅವರ ಅಮಾನತು ಆದೇಶ ರದ್ದುಗೊಳಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ’ ಎಂದು ಹಿಂದೂ ರಕ್ಷಣಾ ದಳದ ಮುಖಂಡರು ಹೇಳಿದ್ದಾರೆ. ‘50ರಿಂದ 60 ಜನರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದು, ತಕ್ಷಣ ಬಿಡುಗಡೆ ಮಾಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅರೆಸೇನಾ ಪಡೆ ಮತ್ತು ಪೊಲೀಸ್ ಪಡೆ ನಿಯೋಜಿಸಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಗೆ ಹೋಗುವ ಮಾರ್ಗವನ್ನು ಪ್ರತಿಭಟನಕಾರರು ಪ್ರವೇಶಿಸದಂತೆ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಮುಚ್ಚಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.