ಚುನಾವಣಾ ಬಾಂಡ್‌: ರಾಷ್ಟ್ರಪತಿಗೆ ಸುಪ್ರೀಂಕೋರ್ಟ್‌ ವಕೀಲರ ಸಂಘ ಪತ್ರ ನವದೆಹಲಿ: ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಸೂಚಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ಆದಿಶ್‌ ಸಿ. ಅಗರವಾಲ್‌, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಾರ್ಪೊರೇಟ್ ಸಂಸ್ಥೆಗಳು, ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದರಿಂದ ಅವರು ಬಲಿಪಶುಗಳಾಗುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ‘ದೇಣಿಗೆ ನೀಡಿದವರ ಹೆಸರು ಮತ್ತು ಅವರು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸಿದರೆ, ಅವರಿಂದ ಕಡಿಮೆ ದೇಣಿಗೆ ಪಡೆದ ಪಕ್ಷಗಳು ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ದೇಣಿಗೆ ಪಡೆಯುವಾಗ ಹೆಸರು ಬಹಿರಂಗಪಡಿಸುವುದಿಲ್ಲ ಎಂಬ ಮಾತು ಕೊಡಲಾಗಿತ್ತು. ಹೆಸರು ಬಹಿರಂಗಪಡಿಸಿದರೆ ವಚನ ಭಂಗ ಮಾಡಿದಂತೆ ಆಗುತ್ತದೆ’ ಎಂದಿದ್ದಾರೆ. ಇಡೀ ವಾದ–ಪ್ರತಿವಾದ ಪ್ರಕ್ರಿಯೆಯನ್ನು ಮತ್ತೊಮ್ಮೆ ಆಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಸೂಚಿಸಬೇಕು. ಹಾಗಾದಲ್ಲಿ ‘ದೇಶದ ಸಂಸತ್ತು, ರಾಜಕೀಯ ಪಕ್ಷಗಳು, ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ಸಾಮಾನ್ಯ ಪ್ರಜೆಗಳಿಗೆ’ ಪರಿಪೂರ್ಣ ನ್ಯಾಯ ದೊರೆತಂತೆ ಆಗಲಿದೆ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.