ಹರಿಯಾಣ: ನವ ಜಾತಿ ಸಮೀಕರಣ ಹರಿಯಾಣ, ದೇಶದ ಶಕ್ತಿ ಕೇಂದ್ರ ದೆಹಲಿಗೆ ಅಂಟಿಕೊಂಡೇ ಇರುವ ಈ ಸಣ್ಣ ರಾಜ್ಯದಲ್ಲಿ ಇರುವುದು 10 ಲೋಕಸಭಾ ಕ್ಷೇತ್ರಗಳು ಮಾತ್ರ. ಆದರೂ ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಅತ್ಯಂತ ಮುಖ್ಯವಾದ ರಾಜ್ಯ ಇದು. ಹರಿಯಾಣವು ಪಕ್ಕದ ಪಂಜಾಬ್‌, ಉತ್ತರ ಪ್ರದೇಶ, ರಾಜಸ್ಥಾನದಲ್ಲಿನ ಚುನಾವಣಾ ಸಮೀಕರಣದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಹರಿಯಾಣದಲ್ಲಿ ಎಲ್ಲವನ್ನೂ ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕಿರುವುದು ಎಲ್ಲಾ ಪಕ್ಷಗಳಿಗೆ ಅನಿವಾರ್ಯವೇ ಆಗಿದೆ. ಒಂದೆರಡು ದಿನಗಳಿಂದ ಹರಿಯಾಣ ಭಾರಿ ಸುದ್ದಿಯಲ್ಲಿದೆ. 9 ವರ್ಷಗಳಿಗಿಂತಲೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ಮನೋಹರ ಲಾಲ್ ಖಟ್ಟರ್ ಇದ್ದಕ್ಕಿಂದ್ದಂತೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ನಾಯಬ್‌ ಸಿಂಗ್‌ ಸೈನಿ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರ ಮತ್ತು ಸಂಪುಟ ಎರಡೂ ಬದಲಾಗಿದೆ. ಈ ಎಲ್ಲಾ ಬೆಳವಣಿಗೆಗೆ ಪ್ರಮುಖ ಕಾರಣವಾಗಿದ್ದು ಲೋಕಸಭಾ ಸೀಟು ಹಂಚಿಕೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆತಿರಲಿಲ್ಲ. ಹೀಗಾಗಿ ಜೆಜೆಪಿ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತ್ತು. ಆದರೆ ಈಗ ಎರಡೂ ಪಕ್ಷಗಳ ಮೈತ್ರಿ ಮುರಿದುಬಿದ್ದಿದೆ, ಅದೂ ಸೀಟು ಹಂಚಿಕೆ ವಿಚಾರದಲ್ಲಿ. 9 ಲೋಕಸಭಾ ಕ್ಷೇತ್ರಗಳನ್ನು ತಾನು ಉಳಿಸಿಕೊಂಡು, ಒಂದರಲ್ಲಿ ಜೆಜೆಪಿ ಕಣಕ್ಕೆ ಇಳಿಯಲಿ ಎಂಬುದು ಬಿಜೆಪಿಯ ಪಟ್ಟು. ತಮಗೆ ಎರಡು ಕ್ಷೇತ್ರಗಳು ಬೇಕೇಬೇಕು ಎಂಬುದು ಜೆಜೆಪಿಯ ಬಿಗಿಪಟ್ಟು. ಈ ಹಗ್ಗಜಗ್ಗಾಟದಲ್ಲಿ ಮೈತ್ರಿ ತುಂಡಾಗಿದೆ. ಎಲ್ಲಾ ಹತ್ತು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುವುದಾಗಿ ಬಿಜೆಪಿ ಘೋಷಿಸಿದೆ. ಜೆಜೆಪಿಯೂ ಅದೇ ಹಾದಿ ಹಿಡಿದಿದೆ. ಇದರ ಮಧ್ಯೆ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಜೆಜೆಪಿ ವಾಪಸ್‌ ಪಡೆದಿದೆ ಮತ್ತು ಉಪಮುಖ್ಯಮಂತ್ರಿ ಸ್ಥಾನವನ್ನೂ ತ್ಯಜಿಸಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಡೆದ ಈ ಬೆಳವಣಿಗೆಗಳು ಚುನಾವಣೆಯ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೆಜೆಪಿ ಮತ್ತು ಬಿಜೆಪಿ ಮೈತ್ರಿ ಮುರಿದುಬಿದ್ದಿದ್ದು ಆ ಎರಡು ಪಕ್ಷಗಳು ಮಾತ್ರವಲ್ಲ, ಜತೆಗೆ ಕಾಂಗ್ರೆಸ್‌ನ ಮೇಲೂ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗುತ್ತಿದೆ. ಜಾಟರು ಜೆಜೆಪಿಯ ಪ್ರಧಾನ ಮತಬ್ಯಾಂಕ್‌. ಜಾಟರ ಕುರಿತು ಹರಿಯಾಣ ಬಿಜೆಪಿ ನಾಯಕರು ಈ ಹಿಂದೆ ಆಡಿದ್ದ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜತೆಗೆ ಎಂಎಸ್‌ಪಿಗೆ ಕಾನೂನಿನ ಭದ್ರತೆ ಒದಗಿಸುವಂತೆ ಪ್ರತಿಭಟಿಸುತ್ತಿರುವ ರೈತರಲ್ಲಿ ಜಾಟರದ್ದೂ ದೊಡ್ಡ ಸಂಖ್ಯೆ ಇದೆ. ಇವೆಲ್ಲವೂ ಒಟ್ಟಾರೆಯಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಸೀಟು ಹಂಚಿಕೆಯಲ್ಲಿ ಎರಡೂ ಪಕ್ಷಗಳು ತಮ್ಮ ಪಟ್ಟು ಬಿಡದೇ ಇರಲು ಇದೇ ಕಾರಣ ಎನ್ನಲಾಗಿದೆ. ರಾಜ್ಯದ ಜನಸಂಖ್ಯೆಯ ಶೇ 20ರಷ್ಟಿರುವ ಜಾಟರು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕರು. ರೈತರ ಪ್ರತಿಭಟನೆ ಕಾರಣದಿಂದ ಜಾಟರು ಬಿಜೆಪಿಯಿಂದ ದೂರ ಸರಿಯಲಿದ್ದಾರೆ ಎಂದೇ ಎಣಿಸಲಾಗಿದೆ. ಜೆಜೆಪಿ ಸ್ವತಂತ್ರವಾಗಿ ಕಣಕ್ಕೆ ಇಳಿದರೆ ಹಲವು ಕ್ಷೇತ್ರಗಳಲ್ಲಿ ಅದು ಬಿಜೆಪಿಗೆ ತೊಡಕಾಗಲಿದೆ. ಆದರೆ ಕಾಂಗ್ರೆಸ್‌ ಸಹ ಜಾಟರು ಮತ್ತು ರೈತರ ಮತಗಳನ್ನೇ ನೆಚ್ಚಿಕೊಂಡಿದೆ. ಜಾಟರ ಮತಗಳು ಜೆಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ವಿಭಜನೆಯಾಗುವ ಸಾಧ್ಯತೆ ಅತ್ಯಧಿಕವಾಗಿದೆ. ಇದರಿಂದ ಬಿಜೆಪಿಗೆ ಲಾಭವೇ ಆಗಲಿದೆ ಎಂಬುದು ಆ ಪಕ್ಷದ ಲೆಕ್ಕಾಚಾರ. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ ಮತ್ತು ಜೆಜೆಪಿ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಗಲಿದೆ. ಆದರೆ ಅಂತಹ ಸಾಧ್ಯತೆ ಅತ್ಯಂತ ಕಡಿಮೆ. ಹರಿಯಾಣದಲ್ಲಿ ಜಾಟರು ಯಾವ ಪಕ್ಷದತ್ತ ಹೊರಳಲಿದ್ದಾರೆ ಎಂಬುದು ಪಂಜಾಬ್‌, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿನ ಜಾಟರ ಆಯ್ಕೆಯನ್ನೂ ಪ್ರಭಾವಿಸಲಿದೆ. ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಗೆ ಜಾಟರು ಕೈಕೊಟ್ಟರೆ, ಅದು ಭಾರಿ ಹಿನ್ನಡೆಗೆ ಕಾರಣವಾಗಲಿದೆ. ಜಾಟರನ್ನು ಸಮಾಧಾನಪಡಿಸಲು ಎಂಎಸ್‌ಪಿಗೆ ಕಾನೂನಿನ ಭದ್ರತೆ ಒದಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಆದರೆ ಜಾಟರು ತಮ್ಮಿಂದ ದೂರ ಸರಿದರೆ ಆಗುವ ನಷ್ಟವನ್ನು ತುಂಬಿಕೊಳ್ಳಲು ಬಿಜೆಪಿ ಬೇರೆ ಜಾತಿ ಸಮೀಕರಣದ ಮೊರೆ ಹೋಗಿದೆ. ಆ ಕಾರಣದಿಂದಲೇ ಖಟ್ಟರ್ ಅವರನ್ನು ಕೆಳಗಿಳಿಸಿ ಒಬಿಸಿ ನಾಯಕ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದೆ. ಒಬಿಸಿ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವ ಸಲುವಾಗಿಯೇ ಸೈನಿ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಜಾತಿಗಣತಿ ಮತ್ತು ಒಬಿಸಿ ಮೀಸಲಾತಿ ಹೆಚ್ಚಳದ ಮಾತುಗಳನ್ನಾಡುತ್ತಿರುವ ಕಾಂಗ್ರೆಸ್‌ನಿಂದ ಒಬಿಸಿ ಮತಗಳನ್ನು ಕಬಳಿಸುವ ತಂತ್ರವೂ ಇದರಲ್ಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಯೋಗಕ್ಕೆ ಇಳಿದ ಬಿಜೆಪಿ ಹರಿಯಾಣದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆ ಚುನಾವಣೆಯನ್ನೂ ಗಮನದಲ್ಲಿ ಇರಿಸಿಕೊಂಡು ಮುಖ್ಯಮಂತ್ರಿ ಮತ್ತು ಸಂಪುಟವನ್ನು ಬಿಜೆಪಿ ಬದಲಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಖಟ್ಟರ್ ಮತ್ತು ಅವರ ಸರ್ಕಾರದ ಮೇಲೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಲೋಕಸಭೆ ಚುನಾವಣೆಯಲ್ಲೂ ಅದು ಪಕ್ಷಕ್ಕೆ ವ್ಯತಿರಿಕ್ತವಾಗಿ ಪರಿಣಮಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಆಡಳಿತ ವಿರೋಧಿ ಅಲೆಯ ಪರಿಣಾಮವನ್ನು ತಗ್ಗಿಸಲೆಂದೇ ಖಟ್ಟರ್ ಅವರನ್ನು ಬದಲಿಸಲಾಗಿದೆ. ಇದೇ ರೀತಿಯ ಪ್ರಯೋಗವನ್ನು ಗುಜರಾತ್ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಬಿಜೆಪಿ ಮಾಡಿತ್ತು. ಮತ್ತು ಅದು ಫಲವನ್ನೂ ಕೊಟ್ಟಿತ್ತು. ಈಚೆಗಷ್ಟೇ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲೂ ಬಿಜೆಪಿಯು ಒಬಿಸಿ ನಾಯಕರನ್ನೇ ಮುಖ್ಯಮಂತ್ರಿಯನ್ನಾಗಿಸಿದೆ. ಈ ಮೂಲಕ ಒಬಿಸಿ ಸಮುದಾಯಗಳಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.