ಪ್ರತಿ ವರ್ಷ ‘ಹೈದರಾಬಾದ್‌ ವಿಮೋಚನಾ ದಿನ’ ಆಚರಣೆ: ಕೇಂದ್ರ ಘೋಷಣೆ ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್‌ 17ರಂದು ‘ಹೈದರಾಬಾದ್‌ ವಿಮೋಚನಾ ದಿನ’ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದೆ. ‘ಸೆ.17ರಂದು ಹೈದರಾಬಾದ್‌ ವಿಮೋಚನಾ ದಿನ ಎಂಬುದಾಗಿ ಆಚರಿಸುವಂತೆ ಆ ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಆ ಭಾಗದ ವಿಮೋಚನೆಗೆ ಹೋರಾಡಿ, ಹುತಾತ್ಮರಾದವರ ಸ್ಮರಣಾರ್ಥ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಗೃಹ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ‘ದೇಶಕ್ಕೆ 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಲಭಿಸಿದ 13 ತಿಂಗಳ ನಂತರವೂ ಆಗಿನ ಹೈದರಾಬಾದ್‌ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ‘ಆಪರೇಷನ್‌ ಪೋಲೊ’ ಹೆಸರಿನ ಪೊಲೀಸ್‌ ಕ್ರಮದ ಬಳಿಕ 1948ರ ಸೆಪ್ಟೆಂಬರ್‌ 17ರಂದು ಈ ಪ್ರದೇಶವು ನಿಜಾಮನ ಆಳ್ವಿಕೆಯಿಂದ ವಿಮೋಚನೆ ಪಡೆಯಿತು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.