ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ ₹1 ಲಕ್ಷ ಸಹಾಯ: ಕಾಂಗ್ರೆಸ್ ಘೋಷಣೆ ಮುಂಬೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಸೆಳೆಯಲು ಕಾಂಗ್ರೆಸ್ ಪಕ್ಷವು ದೇಶದ ಬಡ ಮಹಿಳೆಯರಿಗೆ ವಾರ್ಷಿಕವಾಗಿ ತಲಾ ₹1 ಲಕ್ಷ ನೀಡುವುದು, ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50 ಮೀಸಲು ಒದಗಿಸುವುದು ಸೇರಿದಂತೆ ಐದು ಗ್ಯಾರಂಟಿಗಳನ್ನು ಬುಧವಾರ ಘೋಷಿಸಿದೆ. ‘ನಾರಿ ನ್ಯಾಯ ಗ್ಯಾರಂಟಿ’ ಹೆಸರಿನಲ್ಲಿ ಬಡ ಮಹಿಳೆಯರಿಗೆ ಕಾಂಗ್ರೆಸ್ ಐದು ಭರವಸೆಗಳನ್ನು ನೀಡಿದೆ. ‘ಮಹಾಲಕ್ಷ್ಮಿ’, ‘ಆಧಿ ಆಬಾದಿ–ಪೂರಾ ಹಕ್’, ‘ಶಕ್ತಿ ಕಾ ಸಮ್ಮಾನ್’, ‘ಅಧಿಕಾರ್ ಮೈತ್ರಿ’ ಮತ್ತು ‘ಸಾವಿತ್ರಿಬಾಯಿ ಫುಲೆ ಹಾಸ್ಟೆಲ್‌’–ಇವು ಕಾಂಗ್ರೆಸ್ ಘೋಷಿಸಿದ ಪಂಚ ಗ್ಯಾರಂಟಿಗಳಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪಂಚ ಗ್ಯಾರಂಟಿಗಳನ್ನು ಘೋಷಿಸಿದರು. ಭಾರತ್ ಜೋಡೊ ನ್ಯಾಯ ಯಾತ್ರೆಯ ಅಂಗವಾಗಿ ಮಹಾರಾಷ್ಟ್ರದ ಧುಲೆಯಲ್ಲಿರುವ ಪಕ್ಷದ ನಾಯಕ ರಾಹುಲ್ ಗಾಂಧಿ ‘ಮಹಿಳಾ ಮೇಳಾವ’ದಲ್ಲಿ ಗ್ಯಾರಂಟಿಗಳ ಬಗ್ಗೆ ಮಹಿಳೆಯರಿಗೆ ವಿವರಿಸಿದರು. ‘ಇದಕ್ಕೂ ಮುನ್ನ ನಾವು ಸಹಭಾಗಿತ್ವ ನ್ಯಾಯ, ರೈತ ನ್ಯಾಯ ಮತ್ತು ಯುವ ನ್ಯಾಯ ಘೋಷಿಸಿದ್ದೆವು. ನಮ್ಮ ಗ್ಯಾರಂಟಿಗಳು ಖಾಲಿ ಘೋಷಣೆಗಳಲ್ಲ ಎನ್ನುವುದನ್ನು ನಾವು ಹೇಳಬೇಕಾಗಿಲ್ಲ. ನಮ್ಮ ಹೇಳಿಕೆಗಳಿಗೆ ನಾವು ಬದ್ಧರಾಗಿದ್ದೇವೆ. 1926ರಿಂದ ಇಂದಿನವರೆಗೂ ಈ ದಾಖಲೆ ನಮ್ಮದಾಗಿದೆ. ನಮ್ಮ ವಿರೋಧಿಗಳು ಇನ್ನೂ ಹುಟ್ಟದೇ ಇದ್ದ ಕಾಲದಿಂದಲೂ ನಾವು ಪ್ರಣಾಳಿಕೆ ರೂಪಿಸುತ್ತಿದ್ದೇವೆ, ಘೋಷಣೆಗಳನ್ನು ಜಾರಿ ಮಾಡುತ್ತಿದ್ದೇವೆ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್‌ನ ‘ನಾರಿ ನ್ಯಾಯ ಗ್ಯಾರಂಟಿ’ ಬಡ ಕುಟುಂಬದ ಮಹಿಳೆಗೆ ವಾರ್ಷಿಕ ₹1 ಲಕ್ಷ ಆಧಿ ಆಬಾದಿ–ಪೂರಾ ಹಕ್: ಕೇಂದ್ರ ಸರ್ಕಾರದ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ 50 ಮೀಸಲು ಶಕ್ತಿ ಕಾ ಸಮ್ಮಾನ್: ಅಂಗನವಾಡಿ ಆಶಾ ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದ ಕೊಡುಗೆ ದ್ವಿಗುಣ ಅಧಿಕಾರ್ ಮೈತ್ರಿ: ಮಹಿಳೆಯರಿಗೆ ಹಕ್ಕುಗಳ ಅರಿವು ಮೂಡಿಸಲು ಪ್ರತಿ ಪಂಚಾಯಿತಿಯಲ್ಲಿ ಅರೆಕಾನೂನು/ಕಾನೂನು ಸಹಾಯಕರ ನೇಮಕ ಸಾವಿತ್ರಿಬಾಯಿ ಫುಲೆ ಹಾಸ್ಟೆಲ್‌: ಉದ್ಯೋಗಸ್ಥ ಮಹಿಳೆಯರಿಗಾಗಿ ದೇಶದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕನಿಷ್ಠ ಒಂದು ಹಾಸ್ಟೆಲ್ ಸ್ಥಾಪನೆ ‘22 ಜನರ ಬಳಿ ದೇಶದ ಶೇ 50ರಷ್ಟು ಸಂಪತ್ತು’ ನಿರುದ್ಯೋಗ ಹಣದುಬ್ಬರ ಮತ್ತು ‘ಭಾಗೀದಾರಿ’ ದೇಶದ ಮುಖ್ಯ ಸಮಸ್ಯೆಗಳಾಗಿವೆ. ಆದರೆ ಕೇಂದ್ರ ಸರ್ಕಾರವು ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ಅವರು ಜನರ ಜತೆ ಸಂವಾದ ನಡೆಸಿದರು. ‘ದೇಶದ ಶೇ 50ರಷ್ಟು ಜನ ಶೇ 3ರಷ್ಟು ಸಂಪತ್ತು ಹೊಂದಿದ್ದರೆ ಕೇವಲ 22 ಮಂದಿ ಶೇ 50ಕ್ಕೂ ಹೆಚ್ಚು ಸಂಪತ್ತು ಹೊಂದಿದ್ದಾರೆ. ನೀವು ಪ್ರಶ್ನೆ ಕೇಳದೇ ಇರುವುದರಿಂದ ನಿಮ್ಮ ಗಮನವನ್ನು ಸುಲಭವಾಗಿ ಬೇರೆಡೆ ತಿರುಗಿಸಬಹುದು’ ಎಂದು ಅವರು ಪುನರುಚ್ಚರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.