ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಧ್ವನಿಯಾಗಲಿದೆ: ರಾಹುಲ್ ಗಾಂಧಿ ನಾಸಿಕ್: 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಧ್ವನಿಯಾಗಲಿದೆ ಮತ್ತು ರೈತರನ್ನು ರಕ್ಷಿಸಲು ನೀತಿಗಳನ್ನು ರೂಪಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು. ಗುರುವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದವಾಡದಲ್ಲಿ ನಡೆದ 'ಭಾರತ ಜೋಡೊ ನ್ಯಾಯ ಯಾತ್ರೆ' ಭಾಗವಾಗಿ ರೈತರ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಭಾಗಿಯಾಗಿದ್ದರು. 'ಇಂಡಿಯಾ ಮೈತ್ರಿ ಕೂಟ ರೈತರ ಧ್ವನಿಯಾಗಲಿದೆ. ಅವರ ಹಿತಾಸಕ್ತಿಯನ್ನು ರಕ್ಷಿಸಲು ಕೆಲಸ ಮಾಡಲಿದೆ. ನಮ್ಮ ಹಾಗೂ ಇಂಡಿಯಾ ಮೈತ್ರಿ‌ಕೂಟ ಸರ್ಕಾರದ ಬಾಗಿಲು ಯಾವಾಗಲೂ ರೈತರಿಗೆ ತೆರೆದಿರಲಿದೆ' ಎಂದು ಅವರು ಹೇಳಿದರು. ರೈತರ ಸಾಲ ಮನ್ನಾ, ಬೆಳೆಗಾರರಿಗೆ ಅನುಕೂಲವಾಗುವಂತೆ ಬೆಳೆ ವಿಮಾ ಯೋಜನೆಯ ಪುನಾರಚನೆ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕಾಯ್ದುಕೊಳ್ಳಲು ಅಗತ್ಯವಿರುವ ರಫ್ತು ಮತ್ತು ಆಮದು ನೀತಿಯನ್ನು ರೂಪಿಸಲಾಗುವುದು. ಜತೆಗೆ ಕೃಷಿ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದರು. ಅಲ್ಲದೇ ಸ್ವಾಮಿನಾಥನ್ ಸಮಿತಿಯ ವರದಿಯ ಪ್ರಕಾರ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ಕಾನೂನು ಖಾತರಿ ನೀಡುವ ಕಾಂಗ್ರೆಸ್‌ನ ಭರವಸೆಯನ್ನೂ ಅವರು ಪುನರುಚ್ಚರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.