| ಪಂಜಾಬ್‌: ಎಎಪಿಯ ಮೊದಲ ಪಟ್ಟಿಯಲ್ಲಿ ಐವರು ಹಾಲಿ ಸಚಿವರಿಗೆ ಟಿಕೆಟ್‌ ಚಂಡೀಗಢ: ಪಂಜಾಬ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಎಂಟು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಗುರುವಾರ ಬಿಡುಗಡೆ ಮಾಡಿದೆ. ಐವರು ಸಚಿವರನ್ನೂ ಕಣಕ್ಕಿಳಿಸುತ್ತಿದೆ. ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಮೈತ್ರಿಕೂಟದ ಭಾಗವೂ ಆಗಿರುವ ಎಎಪಿ, ಪಂಜಾಬ್‌ನಲ್ಲಿ ಏಕಾಂಗಿಯಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಒಟ್ಟು 13 ಲೋಕಸಭಾ ಕ್ಷೇತ್ರಗಳಿವೆ. ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯ ಪ್ರಕಾರ, ಸಚಿವರಾದ ಕುಲದೀಪ್ ಸಿಂಗ್ ಧಾಲಿವಾಲ್, ಲಾಲ್‌ಜಿತ್ ಸಿಂಗ್ ಭುಲ್ಲರ್, ಗುರ್ಮೀತ್‌ ಸಿಂಗ್ ಖುಡಿಯಾ, ಗುರ್ಮೀತ್ ಸಿಂಗ್ ಮೀತ್‌ ಹೇಯರ್, ಡಾ.ಬಲ್‌ಬೀರ್ ಸಿಂಗ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಹಾಲಿ ಸಂಸದ ಜಲಂದರ್‌ ಸುಶೀಲ್‌ ರಿಂಕು ಅವರಿಗೂ ಟಿಕೆಟ್‌ ಘೋಷಿಸಿದೆ. ಎಎಪಿಗೆ ಇತ್ತೀಚೆಗೆ ಸೇರ್ಪಡೆಯಾಗಿದ್ದ ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕ ಗುರ್‌ಪ್ರೀತ್ ಸಿಂಗ್, ಹೆಸರಾಂತ ಪಂಜಾಬಿ ನಟ ಕರಮ್‌ಜೀತ್ ಅನ್ಮೋಲ್ ಅವರೂ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ದೆಹಲಿ, ಗುಜರಾತ್ ಮತ್ತು ಹರಿಯಾಣಕ್ಕೆ ಸಂಬಂಧಿಸಿದಂತೆ ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎಎಪಿ ಸೀಟು ಹಂಚಿಕೆ ಮಾಡಿಕೊಂಡಿವೆ. ಪಂಜಾಬ್‌ನಲ್ಲಿ ‌ಏಕಾಂಗಿಯಾಗಿ ಸ್ಪರ್ಧಿಸುತ್ತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.