ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಅನುಮತಿ ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 18ರಂದು ಕೊಯಮತ್ತೂರಿನಲ್ಲಿ ನಡೆಸಲಿರುವ ನಾಲ್ಕು ಕಿ.ಮೀ ರೋಡ್‌ ಶೋಗೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡುವಂತೆ ಮದ್ರಾಸ್‌ ಹೈಕೋರ್ಟ್‌, ಪೊಲೀಸರಿಗೆ ಸೂಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭದ್ರತಾ ಕಾರಣಗಳನ್ನು ನೀಡಿ ಪೊಲೀಸರು ಪ್ರಧಾನಿ ರೋಡ್‌ ಶೋಗೆ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜೆ. ರಮೇಶ್‌ ಕುಮಾರ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ‘ರಾಜಕೀಯ ಕಾರಣಕ್ಕಾಗಿ ರೋಡ್‌ ಶೋಗೆ ಅನುಮತಿ ನಿರಾಕರಿಸಲಾಗಿದೆ. ಇದು ಸಮಂಜಸವಲ್ಲ. ಸಂವಿಧಾನದ 19ನೇ ವಿಧಿಯಡಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ’ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌. ಆನಂದ್‌ ವೆಂಕಟೇಶ್‌ ಅವರು, ಷರತ್ತುಗಳೊಂದಿಗೆ ಅನುಮತಿ ನೀಡುವಂತೆ ಆರ್‌.ಎಸ್‌.ಪುರಂ ವಲಯದ ಸಹಾಯಕ ಪೊಲೀಸ್‌ ಆಯುಕ್ತರಿಗೆ ನಿರ್ದೇಶನ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.