ಚುನಾವಣೆ: ಆಂಧ್ರಪ್ರದೇಶದಲ್ಲಿ YSRCPಯಿಂದ ಎಸ್‌ಸಿ, ಎಸ್‌ಟಿ, ಒಬಿಸಿಗೆ ಶೇ50 ಸ್ಥಾನ ಅಮರಾವತಿ, ಆಂಧ್ರಪ್ರದೇಶ: ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಆಂಧ್ರಪ್ರದೇಶದ ಆಡಳಿತರೂಢ ವೈಎಸ್‌ಆರ್‌ಸಿಪಿ ಪಕ್ಷ ಶನಿವಾರ ರಾಜ್ಯದ ಎಲ್ಲ, ಲೋಕಸಭೆಯ 25, ವಿಧಾನಸಭೆಯ 175 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತು. ಒಟ್ಟು ಕ್ಷೇತ್ರಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಗಳಿಗೆ ಹಂಚಿಕೆ ಮಾಡಿದೆ. ಮುಖ್ಯಮಂತ್ರಿ ಅವರ ತಂದೆ, ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಸಮಾಧಿ ಬಳಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಯಿತು. ಕಡಪ ಜಿಲ್ಲೆಯ ಇಡುಪುಲಪಾಯದಲ್ಲಿರುವ ಸಮಾಧಿ ಸ್ಥಳದ ಬಳಿ ಮುಖ್ಯಮಂತ್ರಿ, ಪಕ್ಷದ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಸಂಸದ ನಂದಿಗಂ ಸುರೇಶ್‌ ಅವರು ಲೋಕಸಭೆ ಕ್ಷೇತ್ರಗಳ ಹಾಗೂ ಸಚಿವ ಡಿ.ಪ್ರಸಾದ ರಾವ್ ಅವರು ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಓದಿದರು. ‘ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಡವರು, ಅಲ್ಪಸಂಖ್ಯಾತ ವರ್ಗಗಳಿಗೆ ರಾಜಕೀಯದಲ್ಲಿ ಉನ್ನತ ಪ್ರಾತಿನಿಧ್ಯ ನೀಡಲಾಗಿದೆ. ಈ ಹಿಂದೆ ಈ ಎಲ್ಲವೂ ಭಾಷಣಕ್ಕೆ ಸೀಮಿತವಾಗಿತ್ತು’ ಎಂದು ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಡಿ.ಪ್ರಸಾದ ರಾವ್‌ ತಿಳಿಸಿದರು. ವಿಧಾನಸಭೆಯ 175 ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಯವರಿಗೆ 29, ಪರಿಶಿಷ್ಟ ಪಂಗಡದವರಿಗೆ 7, ಹಿಂದುಳಿದ ವರ್ಗಗಳಿಗೆ 48, ಇತರೆ ವರ್ಗಗಳಿಗೆ 91 ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಲೋಕಸಭೆಗೆ ಪರಿಶಿಷ್ಟ ಜಾತಿಯ 4, ಪರಿಶಿಷ್ಟ ಪಂಗಡದ 1, ಹಿಂದುಳಿದ ವರ್ಗಗಳಿಗೆ 11, ಇತರೆ ವರ್ಗಗಳಿಗೆ 9 ಸ್ಥಾನ ಹಂಚಿಕೆಯಾಗಿದೆ ಎಂದು ಅವರು ತಿಳಿಸಿದರು. ಒಟ್ಟಾರೆ ಲೋಕಸಭೆಯ 16, ವಿಧಾನಸಭೆಯ 84 ಸೀಟುಗಳನ್ನು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ. ಲೋಕಸಭೆಗೆ ಐವರು, ವಿಧಾನಸಭೆಗೆ 16 ಮಹಿಳೆಯರು ಪಕ್ಷದ ಅಭ್ಯರ್ಥಿಗಳಾಗಿದ್ದಾರೆ. ಮುಖ್ಯಮಂತ್ರಿ ಜಗನಮೋಹನ್‌ ರೆಡ್ಡಿ ಅವರು ಪುಲಿವೆಂದುಲ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಲೋಕಸಭೆ, ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ 153 ಜನರು ಪದವೀಧರರು. 58 ಮಂದಿ ಸ್ನಾತಕೋತ್ತರ ಪದವೀಧರರರು, 5 ಮಂದಿ ಡಾಕ್ಟರೇಟ್‌ ಪದವೀಧರರು ಇದ್ದಾರೆ. ವೃತ್ತಿಯಿಂದ 17 ಮಂದಿ ವೈದ್ಯರು, 15 ಮಂದಿ ವಕೀಲರು, 34 ಮಂದಿ ಎಂಜಿನಿಯರ್‌ಗಳು, ಐವರು ಶಿಕ್ಷಕರು, ಇಬ್ಬರು ಮಾಜಿ ಅಧಿಕಾರಿಗಳು, ತಲಾ ಒಬ್ಬರು ರಕ್ಷಣಾ ಇಲಾಖೆಯ ಮಾಜಿ ಸಿಬ್ಬಂದಿ, ಪತ್ರಕರ್ತ ಸೇರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.