ಬಿಹಾರ: ನೂತನ ಸಚಿವರಿಗೆ ಖಾತೆ ಹಂಚಿಕೆ ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಸಂಪುಟ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಗೃಹ ಮತ್ತು ಸಾಮಾನ್ಯ ಆಡಳಿತ ಖಾತೆಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಅವರಿಗೆ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಖಾತೆಗಳ ಉಸ್ತುವಾರಿ ವಹಿಸಿದ್ದರೆ, ಇನ್ನೋರ್ವ ಉಪ ಮುಖ್ಯಮಂತ್ರಿ ವಿಜಯ್‌ ಸಿನ್ಹಾ ಅವರಿಗೆ ರಸ್ತೆ ನಿರ್ಮಾಣ, ಗಣಿ, ಸಂಸ್ಕೃತಿ ಮತ್ತು ಯುವಜನ ಇಲಾಖೆಗಳ ಉಸ್ತುವಾರಿ ವಹಿಸಲಾಗಿದೆ. ಸಂಪುಟ ಸಚಿವಾಲಯ ಇಲಾಖೆಯು ಶನಿವಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರವಷ್ಟೇ ಸಚಿವ ಸಂಪುಟ ವಿಸ್ತರಿಸಿದ್ದು, 21 ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದ್ದರು. ಪ್ರಸ್ತುತ ಸಂಪುಟ ಸದಸ್ಯರ ಬಲ 30ಕ್ಕೇರಿದೆ. ಕಾಯ್ದೆಯನುಸಾರ ಇನ್ನೂ ಆರು ಜನರ ಸೇರ್ಪಡೆಗೆ ಅವಕಾಶವಿದೆ. ಗೃಹ ಖಾತೆಯ ಜೊತೆಗೆ ಮುಖ್ಯಮಂತ್ರಿ ಅವರು ಸಂಪುಟ ಸಚಿವಾಲಯ, ಚುನಾವಣೆ, ಗುಪ್ತದಳ, ಸಾಮಾನ್ಯ ಆಡಳಿತ ಹಾಗೂ ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳ ಉಸ್ತುವಾರಿ ವಹಿಸುವರು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.