<.... (="4003f7db2c4cad014f708d7d69f37697", =".58900D8624C4B350C3F1EF6024F04673..5F05A2CC1AE2D92EA2CE5643E25D3616..15914")> ಪೂಣೆ/ಮುಂಬೈ/ನಾಗ್ಪುರ: ಮೂರು ಹಾಗೂ ನಾಲ್ಕು ವರ್ಷದ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ವಿರೋಧ ಪಕ್ಷಗಳ ಮೈತ್ರಿಕೂಟ ‘ಮಹಾ ವಿಕಾಸ ಆಘಾಡಿ’ಯು ಶನಿವಾರ ರಾಜ್ಯದಾದ್ಯಂತ ಮೌನ ಪ್ರತಿಭಟನೆ ನಡೆಸಿತು. ಶಿವಸೇನಾ (ಉದ್ಧವ್ ಬಣ), ಎನ್‌ಸಿಪಿ (ಶರದ್‌ ಬಣ) ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಬಾಯಿಗೆ ಕಪ್ಪು ಬಟ್ಟೆ ಧರಿಸಿ, ತಲೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. : 3.98% . . . . ‘ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಾಜ್ಯ ಸರ್ಕಾರವು ಅವರನ್ನು ರಕ್ಷಿಸುತ್ತಿದೆ. ರಾಜ್ಯವು ಇಂಥ ನಾಚಿಕೆಗೇಡಿನ ಸರ್ಕಾರವನ್ನು ಹಿಂದೆಂದೂ ನೋಡಿರಲಿಲ್ಲ. ಕೈಗಳಿಗೆ ರಾಕಿ ಕಟ್ಟಿಸಿಕೊಳ್ಳುವಲ್ಲಿ ‘ಕಂಸ ಮಾಮ’ ಬ್ಯುಸಿ ಆಗಿದ್ದಾರೆ. ಆದರೆ, ತಮ್ಮ ಸಹೋದರಿಯರಿಗೆ ಯಾವಾಗ ನ್ಯಾಯ ಸಿಗಲಿದೆ ಎಂದು ‘ಕಂಸ ಮಾವ’ ಹೇಳಬೇಕು’ ಎಂದು ಶಿವಸೇವಾ (ಉದ್ಧವ್‌ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು. ಎನ್‌ಸಿಪಿ (ಶರದ್‌ ಬಣ) ಮುಖ್ಯಸ್ಥ ಶರದ್‌ ಪವಾರ್‌ ಮಾತನಾಡಿ, ‘ಬದ್ಲಾಪುರ ಪ್ರಕರಣವು ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನವನ್ನು ಹರಾಜು ಹಾಕಿದೆ. ಮಹಿಳೆಯರ ರಕ್ಷಣೆ ತನ್ನ ಜವಾಬ್ದಾರಿ ಎಂಬುದನ್ನು ಈ ಸರ್ಕಾರ ಮರೆತಂತಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ತಲೆಯನ್ನು ಕತ್ತರಿಸುತ್ತಿದ್ದ ಛತ್ರಪತಿ ಶಿವಾಜಿ ನೆಲದಲ್ಲಿ ಇಂಥ ಘಟನೆ ನಡೆದಿದೆ’ ಎಂದರು. ‘ಮಹಿಳೆಯರ ಹಾಗೂ ಮಕ್ಕಳ ಮೇಲಿನ ಬಹುತೇಕ ಅಪರಾಧಗಳು ಠಾಣೆ ಜಿಲ್ಲೆಯಲ್ಲಿಯೇ ನಡೆಯುತ್ತಿವೆ. ಇವುಗಳನ್ನು ಶಿನಸೇನಾದ (ಶಿಂದೆ ಬಣ) ಕಾರ್ಯಕರ್ತರೇ ಎಸಗುತ್ತಿದ್ದಾರೆ. ಮುಖ್ಯಮಂತ್ರಿ ಶಿಂದೆ ಅವರು ಠಾಣೆಯ ಪ್ರಭಾವಶಾಲಿ ನಾಯಕ. ಇವರು ಮುಖ್ಯಮಂತ್ರಿ ಆಗಿರುವುದರಿಂದ ಅವರ ಕಾರ್ಯಕರ್ತರಿಗೆ ಭಯವೇ ಇಲ್ಲದಂತಾಗಿದೆ’ ಎಂದು ಕಾಂಗ್ರೆಸ್‌ ನಾಯಕ ವಿಜಯ್‌ ವಡೆಟ್ಟೀವರ್‌ ಅಭಿಪ್ರಾಯಪಟ್ಟರು. ಬಿಜೆಪಿಯಿಂದಲೂ ಪ್ರತಿಭಟನೆ: ‘ಮಹಾ ವಿಕಾಸ ಆಘಾಡಿ’ ಶನಿವಾರ ನಡೆಸಿದ ಪ್ರತಿಭಟನೆಯನ್ನು ವಿರೋಧಿಸಿ ಬಿಜೆಪಿಯೂ ಬಾಯಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದೆ. ‘ಬದ್ಲಾಪುರದಂಥ ದೌರ್ಜನ್ಯದ ಪ್ರಕರಣಗಳನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಆಯೋಜಿಸಿದ್ದ ಬಂದ್‌ಗೆ ಹೈಕೋರ್ಟ್‌ ತಡೆ ನೀಡಿತ್ತು. ಮುಂಬರುವ ವಿಧಾನಸಭೆ ಚುನಾವಣೆಯ ಕಾರಣಕ್ಕಾಗಿ ಇವರು ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹತಾಶ ಯತ್ನ ನಡೆಸುತ್ತಿದ್ದಾರೆ’ ಎಂದು ಮುಂಬೈನ ಬಿಜೆಪಿ ಘಟಕದ ಅಧ್ಯಕ್ಷ ಧೀರಜ್‌ ಘಾಟೆ ತಿಳಿಸಿದರು. ಬಂದ್‌ ನಡೆದಸಂತೆ ಹೈಕೋರ್ಟ್ ಆದೇಶ ‘ನಮ್ಮ ಧ್ವನಿ ಅಡಗಿಸಲಾಗದು’ ‘ಮಹಾ ವಿಕಾಸ ಆಘಾಡಿ’ಯು ಶನಿವಾರ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿತ್ತು. ಆದರೆ ಬಂದ್‌ ನಡೆಸದಂತೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಆದೇಶ ನೀಡಿತ್ತು. ‘ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಬಂದ್‌ ನಡೆಸದಂತೆ ಆದೇಶ ನೀಡಬೇಕು’ ಎಂದು ಕೋರಿ ವಕೀಲರಾದ ಸುಭಾಷ್‌ ಝಾ ಹಾಗೂ ಗುಣವರ್ತ್ನ ಸದಾವರ್ತೆ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ‘ಬಂದ್‌ ನಡೆಸುವುದು ಹರತಾಳ ಮಾಡುವುದು ಅಸಾಂವಿಧಾನಿಕ ಕೃತ್ಯ. ಬಂದ್‌ ವೇಳೆ ಜೀವಕ್ಕೆ ಹಾನಿಯಾದರೆ ಜನಜೀವನಕ್ಕೆ ತೊಡಕಾದರೆ ಆಸ್ತಿಗಳಿಗೆ ಹಾನಿಯಾದರೆ ಅದಕ್ಕೆ ರಾಜಕೀಯ ಪಕ್ಷಗಳೇ ಹೊಣೆ’ ಎಂಬ ತನ್ನ 2004ರ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್‌ ಬಂದ್‌ ನಡೆಸದಂತೆ ಆದೇಶ ನೀಡಿತ್ತು. ಈ ಆದೇಶವನ್ನು ವಿರೋಧ ಪಕ್ಷಗಳ ನಾಯಕರು ವಿರೋಧಿಸಿದರು. ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸುವುದಾಗಿ ಬಂದ್‌ ಕರೆಯನ್ನು ಹಿಂಪಡೆದರು. ‘ನಾವು ಕರೆ ನೀಡಿದ್ದ ಬಂದ್‌ ಅನ್ನು ತಡೆಯಲು ಸರ್ಕಾರವು ತನ್ನ ‘ನೆಚ್ಚಿನ ಅರ್ಜಿದಾರ’ನನ್ನು ಬಳಸಿಕೊಂಡಿತು’ ಎಂದು ಶಿವಸೇನಾ (ಉದ್ಧವ್‌ ಬಣ) ಸಂಸದ ಸಂಜಯ್‌ ರಾವುತ್‌ ಶನಿವಾರ ದೂರಿದರು. ‘ಸಹೋದರಿಯರು ಸುರಕ್ಷಿತವಾಗಿದ್ದರೆ ಮನೆಯೂ ಸುರಕ್ಷಿತ’ ಎಂಬ ಸಹಿ ಸಂಗ್ರಹ ಅಭಿಯಾನವನ್ನು ನಡೆಸುವಂತೆ ಶಿನಸೇವಾ (ಉದ್ಧವ್‌ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದರು. ‘ಈ ಪತ್ರವನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ಹೈಕೋರ್ಟ್‌ ನಮ್ಮ ಬಂದ್‌ ಅನ್ನು ನಿಲ್ಲಿಸಬಹುದು. ಆದರೆ ನಮ್ಮ ಧ್ವನಿಯನ್ನಲ್ಲ’ ಎಂದು ಉದ್ಧವ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.