ಅಕ್ಕಿ ಗಿರಣಿ ಹಗರಣ: ‘ಮಾರ್ಕ್‌ಫೆಡ್‌’ ಎಂ.ಡಿ ಬಂಧನ ರಾಯಪುರ: ಜಾರಿ ನಿರ್ದೇಶನಾಲಯ (ಇ.ಡಿ) ಛತ್ತೀಸಗಢದ ‘ಮಾರ್ಕ್‌ಫೆಡ್‌’ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಸೋನಿ ಅವರನ್ನು ₹ 175 ಕೋಟಿ ಮೊತ್ತದ ಅಕ್ಕಿ ಗಿರಣಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಸೋನಿ ಅವರನ್ನು ರಾಯಪುರದಲ್ಲಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿ, ವಿಚಾರಣೆಗಾಗಿ ತನ್ನ ವಶಕ್ಕೆ ಒಪ್ಪಿಸುವಂತೆ ಇ.ಡಿ ಕೋರಲಿದೆ ಎಂದು ಮೂಲಗಳು ಹೇಳಿವೆ. ಉನ್ನತ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದು ಸುಮಾರು ₹ 175 ಕೋಟಿ ಮೊತ್ತದ ಹಗರಣವಾಗಿದೆ ಎಂದು ಇ.ಡಿ ಕಳೆದ ವರ್ಷ ಪ್ರಕಟಣೆಯಲ್ಲಿ ತಿಳಿಸಿತ್ತು. ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸೋನಿ, ರಾಜ್ಯ ಅಕ್ಕಿ ಗಿರಣಿಗಾರರ ಸಂಘದ ಖಜಾಂಚಿ ರೋಷನ್‌ ಚಂದ್ರಕರ್‌ ಮತ್ತು ಕೆಲ ಪದಾಧಿಕಾರಿಗಳು, ಜಿಲ್ಲಾ ಮಾರುಕಟ್ಟೆ ಅಧಿಕಾರಿ (ಡಿಎಂಒ) ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.