ರಾಕ್ಷಸೀ ಕೃತ್ಯ ಎಸಗಿರುವ ಪ್ರಜ್ವಲ್‌ ಪಿಎಂ ಮೋದಿ ಪರಿವಾರದ ವ್ಯಕ್ತಿ: ಸುಪ್ರಿಯಾ ಬೆಂಗಳೂರು: ರಾಕ್ಷಸೀ ಕೃತ್ಯ ಎಸಗಿರುವ ಪ್ರಜ್ವಲ್‌ ರೇವಣ್ಣ ಅವರು ನರೇಂದ್ರ ಮೋದಿ ಪರಿವಾರದ ವ್ಯಕ್ತಿ. ಇಂತಹ ಅಭ್ಯರ್ಥಿ ಪರವಾಗಿ 15 ದಿನಗಳ ಹಿಂದಷ್ಟೇ ಪ್ರಧಾನಿ ಮತಯಾಚಿಸಿದ್ದಾರೆ. ಆರೋಪಿ ವಿದೇಶಕ್ಕೆ ಪರಾರಿಯಾಗಲು ಕೇಂದ್ರ ಸರ್ಕಾರದ ಸಹಕಾರವಿದೆ ಎಂದು ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರೀನೆತ್‌ ಆರೋಪಿಸಿದರು. ಪ್ರಿಯಾಂಕಾ ಗಾಂಧಿ ಮಗಳನ್ನು ನೋಡಲು ಹೋಗುವುದೂ ಬಿಜೆಪಿ ನಾಯಕರಿಗೆ ಗೊತ್ತಾಗುತ್ತದೆ. ಇಷ್ಟು ದೊಡ್ಡ ಆರೋಪಿ ತಪ್ಪಿಸಿಕೊಂಡು ಹೋಗುವುದು ತಿಳಿಯಲಿಲ್ಲವೇ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ಮಹಿಳೆಯ ಮೇಲೆ ಶೋಷಣೆ ನಡೆದಾಗ ಪ್ರಧಾನಿ ಮೋದಿ ಅವರು ಕಣ್ಣು ಮುಚ್ಚಿಕೊಳ್ಳುವುದಷ್ಟೇ ಅಲ್ಲ, 500 ಮೀಟರ್ ದೂರ ನಿಲ್ಲುತ್ತಾರೆ. ಪ್ರಜ್ವಲ್‌ ರೇವಣ್ಣನ ಕರ್ಮಕಾಂಡಗಳ ಮಾಹಿತಿಯನ್ನು ಹಾಸನದ ಸ್ಥಳೀಯ ಬಿಜೆಪಿ ಮುಖಂಡರು ಡಿಸೆಂಬರ್‌ನಲ್ಲೇ ತಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಪ್ರಧಾನಿಗೆ ದುಷ್ಕೃತ್ಯಗಳ ಬಗ್ಗೆ ಮೊದಲೇ ಮಾಹಿತಿ ಇದ್ದರೂ, ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಮೈತ್ರಿ ಮಾತುಕತೆ ವೇಳೆ ದೆಹಲಿಯಲ್ಲೂ ಭೇಟಿ ಮಾಡಿದ್ದಾರೆ ಎಂದು ಟೀಕಿಸಿದರು. ಪ್ರಜ್ವಲ್‌ ರೇವಣ್ಣ ಎಸಗಿರುವ ಕೃತ್ಯ ನೋಡಿದರೆ ಆಘಾತವಾಗುತ್ತದೆ. ಸಾವಿರಾರು ಮಹಿಳೆಯರ ಮೇಲೆ ಎಸಗಿರುವ ಕೃತ್ಯವನ್ನು ತಾನೇ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಮನೆಗೆಲಸದವರು, ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇದು ದೇಶದ ದೊಡ್ಡ ಅತ್ಯಾಚಾರ ಪ್ರಕರಣ ಎಂದರು. ಮಣಿಪುರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಕುಲದೀಪ್‌ ಸಿಂಗ್‌ ಸೆಂಗರ್‌ ಪ್ರಕರಣ, ಬ್ರಿಜ್‌ ಭೂಷಣ್‌ ಸಿಂಗ್‌ ನಡೆಸಿದ ದೌರ್ಜನ್ಯ ಪ್ರಕರಣಗಳೇ ಬಿಜೆ‍ಪಿ ಮನಸ್ಥಿತಿಗೆ ಸಾಕ್ಷಿ. ಸ್ಮೃತಿ ಇರಾನಿ ಮೌನವ್ರತ ಆಚರಿಸುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ವಿರೋಧ ಪಕ್ಷದ ನಾಯಕರಿಗೆ ನೋಟಿಸ್‌ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.