| ಸೀಮಂತ ಕಾರ್ಯಕ್ಕೆ ತೆರಳುತ್ತಿದ್ದ ಗರ್ಭಿಣಿ ರೈಲಿನಿಂದ ಬಿದ್ದು ಸಾವು ಕಡಲೂರ್‌: ಚಲಿಸುವ ರೈಲಿನಲ್ಲಿ ಶೌಚಾಲಯ ಬಳಸಲು ಹೋಗುತ್ತಿದ್ದ ಗರ್ಭಿಣಿಯೊಬ್ಬರು ಆಯತಪ್ಪಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆಯು ತಮಿಳುನಾಡಿನ ಉಳಂದೂರುಪೇಟ್ ಹಾಗೂ ವಿರುಧಾಚಲಂ ನಡುವೆ ಶುಕ್ರವಾರ ನಡೆದಿದೆ. ತಿರುಸಲಂ ಮೂಲದ ಕಸ್ತೂರಿ (22) ಎಂಬುವವರೇ ಮೃತ ದುರ್ದೈವಿ. ಏಳು ತಿಂಗಳ ಗರ್ಭಿಣಿಯಾಗಿದ್ದ ಕಸ್ತೂರಿ ಅವರಿಗೆ ತೆಂಕಾಶಿಯಲ್ಲಿ ಸೀಮಂತ ಕಾರ್ಯ ಆಯೋಜನೆಗೊಂಡಿತ್ತು. ಪತಿ ಸುರೇಶ್ ಕುಮಾರ್ ಹಾಗೂ ಸಂಬಂಧಿಕರೊಂದಿಗೆ ಕೊಲ್ಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ರಾತ್ರಿ ಇವರು ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಾಂತಿ ಮತ್ತು ತಲೆಸುತ್ತಿನಿಂದಾಗಿ ಕಸ್ತೂರಿ ಅವರು ಶೌಚಾಲಯ ಬಳಸಲು ತೆರಳಿದರು. ಆದರೆ ಆಯತಪ್ಪಿ ಅವರು ಬಿದ್ದಿದ್ದಾರೆ. ತಕ್ಷಣ ಅವರ ಸಂಬಂಧಿಕರು ಚೈನ್ ಎಳೆದು ರೈಲು ನಿಲ್ಲಿಸುವ ಪ್ರಯತ್ನ ನಡೆಸಿದರು. ರೈಲು ನಿಂತಿತಾದರೂ, ಕಸ್ತೂರಿ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ನಂತರ ರೈಲು ವಿರುಧಾಚಲಂ ನಿಲ್ದಾಣಕ್ಕೆ ತಲುಪಿತು. ಪೊಲೀಸರು ಶೋಧ ಕಾರ್ಯ ನಡೆಸಿದರು. ಉಳಂದೂರುಪೇಟ್‌ನಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಕಸ್ತೂರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.