ಜಾರ್ಖಂಡ್‌: ಗ್ರಾಮೀಣಾಭಿವೃದ್ಧಿ ಇಲಾಖೆ ಮೇಲೆ ಇ.ಡಿ ದಾಳಿ ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಶೋಧ ನಡೆಸಿತು ಎಂದು ಮೂಲಗಳು ತಿಳಿಸಿವೆ. ಸಚಿವ ಆಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್‌ ಲಾಲ್‌ ಮತ್ತು ಅವರ ಮನೆಗೆಲಸ ಮಾಡುತ್ತಿದ್ದ ಜಹಾಂಗೀರ್ ಆಲಂ ಅವರು ವಿಚಾರಣೆ ವೇಳೆ ನೀಡಿದ ಮಾಹಿತಿ ಆಧಾರದಲ್ಲಿ ಶೋಧ ನಡೆಸಲಾಗಿದೆ. ಇಬ್ಬರನ್ನೂ ಇ.ಡಿ ಸೋಮವಾರ ಬಂಧಿಸಿದೆ. ಜಹಾಂಗೀರ್‌ ಆಲಂ ಅವರಿಗೆ ಸಂಬಂಧಿಸಿದ ಸ್ಥಳಗಳಿಂದ ಸುಮಾರು ₹30 ಕೋಟಿ ನಗದನ್ನು ಇ.ಡಿ ವಶಪಡಿಸಿಕೊಂಡಿದೆ. ಪ್ರಭಾವಿ ವ್ಯಕ್ತಿಗಳಿಂದ ಲಾಲ್‌ ‘ಕಮಿಷನ್‌’ ಪಡೆಯುತ್ತಿದ್ದರು ಎಂದು ಇ.ಡಿ ಕೋರ್ಟ್‌ಗೆ ಮಂಗಳವಾರ ತಿಳಿಸಿತ್ತು. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ‘ಅಡಿಯಿಂದ ಮುಡಿಯವರೆಗೆ’ ಹಣ ಅಕ್ರಮ ವರ್ಗಾವಣೆ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಇ.ಡಿ. ಹೇಳಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.