ಸಂಸದರ ನಿಧಿಯ ಹೆಚ್ಚು ಭಾಗ ಅಲ್ಪಸಂಖ್ಯಾತರಿಗೆ ವ್ಯಯಿಸಿರುವ ಸೋನಿಯಾ: ಶಾ ರಾಯ್‌ ಬರೇಲಿ: ತಮ್ಮ ಸಂಸದರ ನಿಧಿಯಲ್ಲಿ ಶೇ 70ಕ್ಕಿಂತಲೂ ಅಧಿಕ ಪ್ರಮಾಣವನ್ನು ಅಲ್ಪಸಂಖ್ಯಾತರಿಗೆ ವ್ಯಯಿಸಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಯ್ ಬರೇಲಿಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ಕ್ಷೇತ್ರದಿಂದ ಗಾಂಧಿ ಕುಟುಂಬಕ್ಕೆ ಹಲವು ವರ್ಷಗಳಿಂದ ಅವಕಾಶ ನೀಡಿದ್ದೀರಿ. ಆದರೆ, ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಕಾಂಗ್ರೆಸ್‌ಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಂಬಿಕೆ ಇಲ್ಲ. ನಿಮ್ಮ ಸುಖ ದುಃಖಗಳ ಸಂದರ್ಭದಲ್ಲೂ ಅವರು ನಿಮ್ಮ ಬಳಿಗೆ ಬರುವುದಿಲ್ಲ’ ಎಂದಿದ್ದಾರೆ. ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ ಶಾ, ರಾಯ್ ಬರೇಲಿಯನ್ನು ಮೋದಿ ಜೀಯವರ ಅಭಿವೃದ್ಧಿ ಪಯಣದಲ್ಲಿ ಸೇರಿಸುತ್ತೇವೆ ಎಂದಿದ್ದಾರೆ. ‘ಕಾಂಗ್ರೆಸ್‌ನ ರಾಜಕುಮಾರ(ರಾಹುಲ್ ಗಾಂಧಿ) ಮತ ಕೇಳಲು ಇಲ್ಲಿಗೆ ಬರುತ್ತಾರೆ. ಹಲವು ವರ್ಷಗಳಿಂದ ನೀವು ಗಾಂಧಿ ಕುಟುಂಬಕ್ಕೆ ಮತ ಹಾಕುತ್ತಿದ್ದೀರಿ. ಸಂಸದರ ನಿಧಿಯಿಂದ ಏನಾದರೂ ಪಡೆದಿದ್ದೀರ? ನೀವು ಏನನ್ನೂ ಪಡೆದಿಲ್ಲ ಎಂದಾದರೆ ಅದು ಎಲ್ಲಿಗೆ ಹೋಗಿದೆ? ಅದು ಅವರ ವೋಟ್‌ಬ್ಯಾಂಕ್‌ಗೆ ಹೋಗಿದೆ. ಸೋನಿಯಾ ಗಾಂಧಿ ಶೇ 70ಕ್ಕಿಂತಲೂ ಅಧಿಕ ಸಂಸದರ ನಿಧಿಯನ್ನು ಅಲ್ಪಸಂಖ್ಯಾತರಿಗೆ ವಿನಿಯೋಗಿಸಿದ್ದಾರೆ’ ಎಂದು ಶಾ ಆರೋಪಿಸಿದ್ದಾರೆ. ‘ಗಾಂಧಿ ಕುಟುಂಬದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಈಗ ಪ್ರತಿ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ನೀಡುವುದಾಗಿ ಹೇಳುತ್ತಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಪ್ರತಿ ಮಹಿಳೆಗೆ ₹15,000 ನೀಡುವುದಾಗಿ ಭರವಸೆ ನೀಡಿದ್ದರು. ಈಗ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 15 ಸಾವಿರವಿರಲಿ, ₹1,500 ಸಹ ನೀಡಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸೋನಿಯಾ ಗಾಂದಿ ಬದಲಿಗೆ ರಾಹುಲ್ ಗಾಂಧಿ ಕಣಕ್ಕಿಳಿದಿದ್ದು, ಐದನೇ ಹಂತದಲ್ಲಿ ಇದೇ 20ರಂದು ಚುನಾವಣೆ ನಡೆಯಲಿದೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದಲೂ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದಾರೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.