ಲೋಕಸಭಾ ಚುನಾವಣೆ | ಬಂಗಾಳ ಸಂಸ್ಕೃತಿ ಉಳಿಸಿ, ಟಿಎಂಸಿ ತ್ಯಜಿಸಿ: ಮೋದಿ ಕರೆ ಕೋಲ್ಕತ್ತ: ಈ ಬಾರಿಯ ಲೋಕಸಭಾ ಚುನಾವಣೆಯು ಬಂಗಾಳದ ಸಂಸ್ಕೃತಿಯನ್ನು ರಕ್ಷಿಸುವುದಕ್ಕಾಗಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಅರಂಬಾಗ್‌ ಲೋಕಸಭಾ ಕ್ಷೇತ್ರದ ಪುರ್‌ಸುರಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸರ್ಕಾರ ಇರುವ ಪಶ್ಚಿಮ ಬಂಗಾಳದಲ್ಲಿ ವಾಕ್‌ ಸ್ವಾತಂತ್ರ್ಯವೇ ಇಲ್ಲದಂಗಾಗಿದೆ ಎಂದು ಆರೋಪಿಸಿದ್ದಾರೆ. ಬಂಗಾಳದಲ್ಲಿ ರಾಮ ಮಂದಿರದ ವಿಚಾರ ಮಾತನಾಡುವುದೇ ಅಪರಾಧ ಎನ್ನುವಂತಾಗಿದೆ. ಒಂದು ವೇಳೆ ಯಾರಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯಾಸ್ಪದವಾಗಿ ಪೋಸ್ಟ್ ಹಂಚಿಕೊಂಡರೂ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದೂರಿದ್ದಾರೆ. ಈ ಬಾರಿಯ ಚುನಾವಣೆ ನಡೆಯುತ್ತಿರುವುದು ರಾಜ್ಯದ ಅಭಿವೃದ್ಧಿಗಾಗಿ ಎಂದಿರುವ ಮೋದಿ, ಟಿಎಂಸಿ ಪಕ್ಷವು ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ಗುಡುಗಿದ್ದಾರೆ. ಹಾಗೆಯೇ, ಬಿಜೆಪಿಯನ್ನು ಬೆಂಬಲಿಸುವ ಮೂಲಕ ಬಂಗಾಳದ ಸಂಸ್ಕೃತಿಯನ್ನು ರಕ್ಷಿಸಿ, ಟಿಎಂಸಿಯನ್ನು ತ್ಯಜಿಸಿ ಎಂದು ಜನರಿಗೆ ಕರೆ ನೀಡಿದ್ದಾರೆ. ರಾಜ್ಯ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದೆ. ಆ ಮೂಲಕ ಜನರು ಕಿತ್ತಾಡುವಂತೆ ಮಾಡುತ್ತಿದೆ ಎಂದು ಕಿಡಿಕಾರಿರುವ ಪ್ರಧಾನಿ, 'ಸಿಎಎ ಎಂಬುದು ಸಾಂವಿಧಾನಿಕ ಮತ್ತು ಮೋದಿಯ ಗ್ಯಾರಂಟಿಯಾಗಿದೆ' ಎಂದು ಭರವಸೆ ನೀಡಿದ್ದಾರೆ. ಸಿಎಎ ಕುರಿತು ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳು ಟಿಎಂಸಿಗೆ ಮುಳುವಾಗಲಿದೆ ಎಂದೂ ಹೇಳಿದ್ದಾರೆ. ಅರಂಬಾಗ್‌ ಕ್ಷೇತ್ರದಿಂದ ಅರೂಪ್‌ ಕಂಟಿ ದಿಗರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮಿತಾಲಿ ಬಾಗ್‌ ಟಿಎಂಸಿಯಿಂದ ಮತ್ತು ವಿಪ್ಲವ್‌ ಕುಮಾರ್ ಮೋಯಿತ್ರಾ ಸಿಪಿಐ(ಎಂ)ನಿಂದ ಕಣಕ್ಕಿಳಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.