ಅಂಗಾಂಗ ಕಸಿ: ನಕಲಿ ಎನ್‌ಒಸಿ– ಇಬ್ಬರು ವೈದರ ಬಂಧನ ಜೈಪುರ: ಅಂಗಾಂಗ ಕಸಿಗೆ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಿದ ಪ್ರಕರಣ ಸಂಬಂಧ ಜೈಪುರದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ. ಜೈಪುರದ ಫೋರ್ಟಿಸ್‌ ಆಸ್ಪತ್ರೆಯ ನೆಫ್ರಾಲಜಿಸ್ಟ್‌ ಡಾ. ಜಿತೇಂದ್ರ ಗೋಸ್ವಾಮಿ ಮತ್ತು ಯುರಾಲಜಿಸ್ಟ್‌ ಡಾ. ಸಂದೀಪ್‌ ಗುಪ್ತಾ ಅವರನ್ನು ಐಪಿಸಿ ಕಲಂ 419, 420, 471, 370, 120–ಬಿ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಕಲಿ ಎನ್‌ಒಸಿಗೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರವು ಸವಾಯಿ ಮಾನ್‌ ಸಿಂಗ್‌ (ಎಸ್‌ಎಂಎಸ್‌) ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಜೀವ್‌ ಬಗ್ರಾಹಟ್ಟಾ ಮತ್ತು ಎಸ್‌ಎಂಎಸ್‌ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಡಾ. ಅಚಲ್‌ ಶರ್ಮಾ ಅವರನ್ನು ತಮ್ಮ ಹುದ್ದೆಗಳಿಂದ ಮಂಗಳವಾರ ಬಿಡುಗಡೆ ಮಾಡಿದೆ. ಅಲ್ಲದೆ, ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (ಎಸ್‌ಒಟಿಒ) ‘ಸ್ಟೀರಿಂಗ್‌’ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಡಾ. ಸುಧೀರ್‌ ಭಂಡಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ಭಂಡಾರಿ ಅವರು ರಾಜಸ್ಥಾನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಯುಎಚ್‌ಎಸ್‌) ಕುಲಪತಿ ಹುದ್ದೆಗೂ ಗುರುವಾರ ರಾಜೀನಾಮೆ ನೀಡಿದ್ದಾರೆ. ಅಂಗಾಂಗ ಕಸಿಗೆ ಸಂಬಂಧಿಸಿದಂತೆ ಎನ್‌ಒಸಿ ನೀಡಲು ಲಂಚ ಪಡೆದ ಮೂವರನ್ನು ಭ್ರಷ್ಟಾಚಾರ ನಿಗ್ರಹ ದಳದ ತಂಡದವರು ಏಪ್ರಿಲ್‌ 1ರಂದು ಬಂಧಿಸಿದ್ದರು. ಇವರು ಹಣ ಪಡೆದು ನಕಲಿ ಎನ್‌ಒಸಿ ನೀಡುತ್ತಿದ್ದರು ಎಂಬ ಆರೋಪ ಇದೆ. ಬಳಿಕ ಜೈಪುರದ ಕೆಲವು ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.