ಅದಾನಿ,ಅಂಬಾನಿ ಕಾಂಗ್ರೆಸ್‌ಗೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ ತನಿಖೆ ಮಾಡಿ: ಖರ್ಗೆ ಧುಲೆ(ಮಹಾರಾಷ್ಟ್ರ): ಅದಾನಿ ಮತ್ತು ಅಂಬಾನಿ ಕಾಂಗ್ರೆಸ್ ಪಕ್ಷಕ್ಕೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ, ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ, ಹಣ ಇರುವೆಡೆ ದಾಳಿ ಮಾಡಿ ಸತ್ಯ ಹೊರಗೆ ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ. ಮಹಾರಾಷ್ಟ್ರದ ಧುಲೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಸಿಬಿಐ, ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಪ್ರಧಾನಿ ಮೋದಿ ತಮ್ಮ ವಿರೋಧಿಗಳನ್ನು ಹಣಿಯಲು ಬಳಸುತ್ತಿದ್ದಾರೆ. ವಿವಿಧ ಪಕ್ಷಗಳ ಸುಮಾರು 800 ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ದೂರಿದರು. ‘ಇಷ್ಟೂ ಮಾಡಿರುವ ಮೋದಿ, ಒಂದು ಪಕ್ಷ ಅದಾನಿ ಮತ್ತು ಅಂಬಾನಿ ಟೆಂಪೊದಲ್ಲಿ ಹಣವನ್ನು ತುಂಬಿ ಕಾಂಗ್ರೆಸ್‌ಗೆ ಕಳುಹಿಸಿದ್ದರೆ ಅದೇ ತನಿಖಾ ಸಂಸ್ಥೆಗಳನ್ನು ಬಳಸಿ ತನಿಖೆ ನಡೆಸಲಿಲ್ಲವೇಕೆ? ಈ ಮಾತನ್ನು ನಂಬುವುದಾದರೆ, ನಮಗೆ ಅವರು ಹಣ ಕಳುಹಿಸುವಾಗ ಮೋದಿ ನಿದ್ದೆ ಮಾಡುತ್ತಿದ್ದರೇ?’ ಎಂದು ಪ್ರಶ್ನಿಸಿದ್ದಾರೆ. ಅಂಬಾನಿ ಮತ್ತು ಅದಾನಿ ಜೊತೆ ಕಾಂಗ್ರೆಸ್ ಡೀಲ್ ಮಾಡಿಕೊಂಡಿದೆ ಎಂದು ಆರೋಪಿಸಿದ್ದ ಮೋದಿ, ಆ ಪಕ್ಷದ ನಾಯಕ ರಾಹುಲ್ ಗಾಂಧಿ, ಅಂಬಾನಿ ಮತ್ತು ಅದಾನಿಯನ್ನು ಟೀಕೆ ಮಾಡದೇ ಸುಮ್ಮನಿರಲು ಇಬ್ಬರೂ ಉದ್ಯಮಿಗಳಿಂದ ಕಾಂಗ್ರೆಸ್ ಪಕ್ಷವು ಟೆಂಪೊಗಳಲ್ಲಿ ಹಣ ಪಡೆದಿದೆಯೇ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಖರ್ಗೆ,‘ಮೋದಿ ಹೇಳಿಕೆ ನೀಡಿ ಓಡಿ ಹೋಗ್ತಾರೆ. ಧೈರ್ಯವಿದ್ದರೆ ಅವರು ಈ ಉದ್ಯಮಿಗಳ ಮನೆ ಮೇಲೆ ಇ.ಡಿ, ಸಿಬಿಐ ಮತ್ತು ಐಟಿ ಇಲಾಖೆ ದಾಳಿ ನಡೆಸಲಿ. ಸತ್ಯ ಹೊರಬರಲಿದೆ. ಈವರೆಗೆ ಮೋದಿ ಉದ್ಯಮಿಗಳ ಹಿತಾಸಕ್ತಿಯನ್ನು ಕಾಯುತ್ತಿದ್ದಾರೆ. ಈಗ ಅವರನ್ನು ಟೀಕಿಸುವುದೇಕೆ?’ಎಂದು ಪ್ರಶ್ನಿಸಿದ್ದಾರೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.