ಗಂಗಾ ಮತ್ತಷ್ಟು ಮಲಿನವಾಗಿದ್ದು ಏಕೆ?: ಕಾಂಗ್ರೆಸ್ ನವದೆಹಲಿ: ವಾರಾಣಸಿಯಲ್ಲಿ ಪ್ರಧಾನಿ ದತ್ತು ಪಡೆದಿದ್ದ ಹಳ್ಳಿಗಳನ್ನು ಕೈಬಿಟ್ಟಿದ್ದು ಏಕೆ, ₹20 ಸಾವಿರ ಕೋಟಿ ಖರ್ಚು ಮಾಡಿದರೂ ಗಂಗಾ ನದಿ ಮತ್ತಷ್ಟು ಮಲಿನಗೊಂಡಿರುವುದು ಏಕೆ ಎಂದು ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಪ್ರಶ್ನಿಸಿದೆ. ಮೋದಿ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ‘ನಿರ್ಗಮಿತ’ ಪ್ರಧಾನಿಯು ವಾರಾಣಸಿಯಲ್ಲಿನ ಅವರ ವೈಫಲ್ಯಗಳಿಗೆ ಉತ್ತರಿಸಬೇಕು ಎಂದಿದೆ. ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ‘2014ರಲ್ಲಿ ಮೋದಿ ವಾರಾಣಸಿಗೆ ಬಂದಾಗ, ‘ಗಂಗಾ ಮಾತೆಯು ನನ್ನನ್ನು ಕರೆದಿದ್ದಾಳೆ’ ಎಂದು ಹೇಳಿದ್ದರು ಮತ್ತು ಪವಿತ್ರ ಗಂಗೆಯ ನೀರನ್ನು ಸ್ವಚ್ಚಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಚಾಲ್ತಿಯಲ್ಲಿದ್ದ ‘ಆಪರೇಷನ್ ಗಂಗಾ’ ಅನ್ನು ‘ನಮಾಮಿ ಗಂಗಾ’ ಎಂದು ಬದಲಾಯಿಸಿದರು’ ಎಂದು ಉಲ್ಲೇಖಿಸಿದ್ದಾರೆ. ‘ಹತ್ತು ವರ್ಷಗಳಲ್ಲಿ ‘ನಮಾಮಿ ಗಂಗಾ’ ಯೋಜನೆಗಾಗಿ ಬೊಕ್ಕಸದಿಂದ ₹20 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಅದರ ಫಲಶ್ರುತಿ ಇಲ್ಲಿದೆ: ಮಲಿನಗೊಂಡ ನದಿ ಪ್ರಾಂತ್ಯಗಳ ಸಂಖ್ಯೆಯು ಶೇ 51ರಿಂದ ಶೇ 66ಕ್ಕೆ ಏರಿಕೆಯಾಗಿರುವುದು; ಗಂಗೆಯ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾದ ಪ್ರಮಾಣವು ಸುರಕ್ಷತಾ ಮಟ್ಟಕ್ಕಿಂತ ಶೇ 40ರಷ್ಟು ಹೆಚ್ಚಳವಾಗಿದೆ ಎಂದು ನಿಗಾ ಕೇಂದ್ರಗಳು ವರದಿ ಮಾಡಿರುವುದು ಮತ್ತು ಪ್ರತಿಜೀವಾಣುಗಳಿಗೆ ನಿರೋಧಕಶಕ್ತಿ ಬೆಳೆಸಿಕೊಂಡ ಬ್ಯಾಕ್ಟೀರಿಯಾ ನದಿಯ ನೀರಿನಲ್ಲಿ ಕಂಡುಬಂದಿರುವುದು’ ಎಂದು ತಿಳಿಸಿದ್ದಾರೆ. ‘ಹಾಗಿದ್ದರೆ, ತೆರಿಗೆದಾರರ ₹20 ಸಾವಿರ ಕೋಟಿ ಎಲ್ಲಿ ಹೋಯಿತು? ಅದರಲ್ಲಿ ಎಷ್ಟು ಹಣವನ್ನು ಕೆಟ್ಟ ನಿರ್ವಹಣೆ ಮತ್ತು ಭ್ರಷ್ಟಾಚಾರ ನುಂಗಿಹಾಕಿತು? ಗಂಗಾ ಮಾತೆಯ ವಿಚಾರದಲ್ಲೂ ಸುಳ್ಳು ಹೇಳುವ ಮನುಷ್ಯನನ್ನು ವಾರಾಣಸಿಯ ಜನ ಹೇಗೆ ನಂಬುವುದು’ ಎಂದು ಪ್ರಶ್ನಿಸಿದ್ದಾರೆ. ‘ಹಳ್ಳಿಗಳನ್ನು ಕೈಬಿಟ್ಟ ಪ್ರಧಾನಿ’: ‘ವಾರಾಣಸಿಯ ಹೊರಭಾಗದಲ್ಲಿರುವ 8 ಹಳ್ಳಿಗಳನ್ನು ಪ್ರಧಾನಿ ದತ್ತು ಪಡೆದಿದ್ದರು. ಅವುಗಳಿಗೆ ‘ಸ್ಮಾರ್ಟ್‌’ ಶಾಲೆಗಳು, ಆರೋಗ್ಯ ಸೌಲಭ್ಯ, ವಸತಿ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ, 10 ವರ್ಷಗಳ ನಂತರ, 2024ರ ಮಾರ್ಚ್‌ನಲ್ಲಿ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿದರೆ, ಹಳ್ಳಿಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಎನ್ನುವುದು ಕಂಡುಬರುತ್ತದೆ’ ಎಂದು ಟೀಕಿಸಿದ್ದಾರೆ. ‘ದೊಮ್ರಿ ಗ್ರಾಮದಲ್ಲಿ ಪಕ್ಕಾ ಮನೆಗಳೇ ಇಲ್ಲ. ನಾಗೇಪುರದಲ್ಲಿ ಅತ್ಯಂತ ಕಳಪೆ ರಸ್ತೆಗಳಿವೆ. ಜೋಗಪುರ ಮತ್ತು ಜಯಪುರದ ದಲಿತರ ಮನೆಗಳಲ್ಲಿ ಶೌಚಾಲಯವಾಗಲಿ, ನೀರಿನ ಸೌಲಭ್ಯವಾಗಲಿ ಇಲ್ಲ. ಪ್ರಮುಖವಾದ ‘ನಲ್ ಸೆ ಜಲ್‌’ ಯೋಜನೆಯು ಪರಂಪುರ ಗ್ರಾಮವನ್ನು ತಲುಪಿಯೇ ಇಲ್ಲ’ ಎಂದಿದ್ದಾರೆ. ‘ಮೋದಿ ದತ್ತು ಪಡೆದ ಹಳ್ಳಿಗಳು ತನ್ನ ಕ್ಷೇತ್ರದ ಜನರೆಡೆಗಿನ ಅವರ ಕರ್ತವ್ಯ ಪ್ರಜ್ಞೆ ಅಥವಾ ಅದರ ಕೊರತೆಯ ಬಗ್ಗೆ ಅನೇಕ ವಿಷಯಗಳನ್ನು ತಿಳಿಸುತ್ತದೆ. ಪ್ರಧಾನಿ ತಾವು ದತ್ತು ಪಡೆದ ಹಳ್ಳಿಗಳನ್ನು ಕೈಬಿಟ್ಟಿದ್ದು ಏಕೆ? ಇದು ‘ಮೋದಿ ಗ್ಯಾರಂಟಿ’ಯ ನಿಜವಾದ ಮುಖವೇ? ಎಂದು ಪ್ರಶ್ನಿಸಿದ್ದಾರೆ. ‘ಗೋಡ್ಸೆ ಬಗೆಗಿನ ಅಭಿಮಾನ ಬಹಿರಂಗಪಡಿಸುವರೇ?’ ‘ಪ್ರಧಾನಿ ಅವರು ವಾರಾಣಸಿಯಲ್ಲಿ ಮಹಾತ್ಮ ಗಾಂಧಿ ಅವರ ಪರಂಪರೆಯನ್ನು ನಾಶ ಮಾಡಲು ನಿರ್ಧರಿಸಿರುವುದು ಏಕೆ?’ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. ‘ಆಚಾರ್ಯ ವಿನೋಭಾ ಭಾವೆ ಅವರು ಸ್ಥಾಪಿಸಿದ ರಾಜೇಂದ್ರ ಪ್ರಸಾದ್ ಲಾಲ್‌ ಬಹದ್ದೂರ್ ಶಾಸ್ತ್ರಿ ಮತ್ತು ಜಯಪ್ರಕಾಶ್ ನಾರಾಯಣ್‌ರಂಥವರು ಒಡನಾಟ ಹೊಂದಿದ್ದ ‘ಸರ್ವ ಸೇವಾ ಸಂಘ’ವನ್ನು ನಾಶ ಮಾಡುವ ಮಟ್ಟಕ್ಕೆ ಅವರು ರಾಷ್ಟ್ರಪಿತ ಗಾಂಧಿಯೆಡೆಗಿನ ತಮ್ಮ ದುರುದ್ದೇಶಪೂರಿತ ದ್ವೇಷವನ್ನು ಕೊಂಡೊಯ್ದರು’ ಎಂದು ತಿಳಿಸಿದ್ದಾರೆ. ‘ವಾರಾಣಸಿಯ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿದ್ದ 13 ಎಕರೆ ಪ್ರದೇಶದಲ್ಲಿ ಅದು ಇತ್ತು. ಆ ಜಾಗವು ಸಂಸ್ಥೆಗೇ ಸೇರಿತ್ತು. ಆದರೆ ಸಂಸ್ಥೆಯನ್ನು ಆಗಸ್ಟ್ 2023ರಲ್ಲಿ ಅಲ್ಲಿಂದ ಖಾಲಿ ಮಾಡಿಸಿ ಜಾಗವನ್ನು ಭಾರತೀಯ ರೈಲ್ವೆಗೆ ನೀಡಲಾಯಿತು. ಅದರ ಒಂದು ಪಾರ್ಶ್ವದಲ್ಲಿದ್ದ ಗಾಂಧಿ ವಿದ್ಯಾ ಸಂಸ್ಥಾನವನ್ನು ಮಾತ್ರ ಮುಟ್ಟಿಲ್ಲ. ಏಕೆಂದರೆ ಅದು ಈಗಾಗಲೇ ಆರ್‌ಎಸ್‌ಎಸ್‌ ಸ್ವಾಧೀನಕ್ಕೊಳಪಟ್ಟಿದೆ. ವಿದೇಶಗಳಲ್ಲಿ ಗಾಂಧಿಯನ್ನು ಹೊಗಳಿ ಸ್ವದೇಶದಲ್ಲಿ ಗಾಂಧಿಯ ಸಂಸ್ಥೆಗಳನ್ನು ನಾಶ ಮಾಡುವ ಬೂಟಾಟಿಕೆ ಏಕೆ? ಗಾಂಧಿಗಿಂತ ಗೋಡ್ಸೆ ಬಗೆಗಿನ ತಮ್ಮ ಅಭಿಮಾನವನ್ನು ಪ್ರಧಾನಿ ಬಹಿರಂಗವಾಗಿ ವ್ಯಕ್ತಪಡಿಸುವರೇ’ ಎಂದು ಪ್ರಶ್ನಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.