ರಾಜೀನಾಮೆ ನೀಡಿದ್ದಕ್ಕೆ ವಿರೋಧ: ರಾಜ್‌ಕುಮಾರ್ ನಿವಾಸದ ಎದುರು ಎಎಪಿ ಪ್ರತಿಭಟನೆ ನವದೆಹಲಿ: ಆಮ್‌ ಆದ್ಮಿ ಪಕ್ಷ (ಎಎಪಿ), ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ವಿರೋಧಿಸಿ ಪಟೇಲ್‌ ನಗರದಲ್ಲಿರುವ ರಾಜ್‌ಕುಮಾರ್‌ ಆನಂದ್ ಅವರ ನಿವಾಸದ ಎದುರು ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ‘ಆನಂದ್‌ ಅವರು ಕಳೆದ ನಾಲ್ಕು ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ತಮಗೆ ಮತ ಹಾಕಿದರೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು. ರಾಜೀನಾಮೆಯಿಂದಾಗಿ ಅವರು ಪ್ರತಿನಿಧಿಸಿದ ಕ್ಷೇತ್ರದ ಜನರಿಗೆ ಅನ್ಯಾಯವಾಗಿದೆ’ ಎಂದು ಕಾರ್ಯಕರ್ತ ಅಂಕುಶ್‌ ನಾರಂಗ್ ಹೇಳಿದರು. ‘ಪಕ್ಷದ ಹಲವು ಕಾರ್ಯಕರ್ತರು ಮತ್ತು ಪಟೇಲ್‌ ನಗರದ ನಿವಾಸಿಗಳು ಅವರ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಹೇಳಿದರು. ‘ಆನಂದ್ ಅವರು ಜಾರಿ ನಿರ್ದೇಶನಾಲಯದ ದಾಳಿಗೆ ಹೆದರಿ ಪಕ್ಷ ತೊರೆದಿದ್ದಾರೆ’ ಎಂದು ಆರೋಪಿಸಿದರು. ಆನಂದ್‌ 2020ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಟೇಲ್‌ ನಗರ ಕ್ಷೇತ್ರದಿಂದ ಜಯಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.