ದೆಹಲಿ ಅಬಕಾರಿ ನೀತಿ ಹಗರಣ: ಬಿಆರ್‌ಎಸ್‌ ನಾಯಕಿ ಕವಿತಾ ಏ.15ರವರೆಗೆ ಸಿಬಿಐ ವಶಕ್ಕೆ ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರನ್ನು ಏಪ್ರಿಲ್‌ 15ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಕವಿತಾ ಪರ ವಕೀಲರ ಮತ್ತು ರಾಷ್ಟ್ರೀಯ ತನಿಖಾ ದಳದ (ಸಿಬಿಐ) ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು, ಈ ನಿರ್ದೇಶನ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕವಿತಾ ಅವರನ್ನು ಮಾರ್ಚ್‌ 15ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ನಿವಾಸದಿಂದ ಬಂಧಿಸಿ ತಿಹಾರ್‌ ಜೈಲಿನಲ್ಲಿ ಇರಿಸಿತ್ತು. ದೆಹಲಿಯ ವಿಶೇಷ ನ್ಯಾಯಾಲಯದ ಅನುಮತಿ ಪಡೆದ ಬಳಿಕ ಸಿಬಿಐ ಅಧಿಕಾರಿಗಳು ಅವರನ್ನು ಗುರುವಾರ ಬಂಧಿಸಿದ್ದರು. ನ್ಯಾಯಾಲಯವು ಕಳೆದ ಮಂಗಳವಾರವಷ್ಟೇ (ಏ.9) ಕವಿತಾ ಅವರ ನ್ಯಾಯಾಂಗ ಬಂಧನವನ್ನು ಎರಡು ವಾರಗಳವರೆಗೆ ವಿಸ್ತರಿಸಿತ್ತು. ಕವಿತಾ ಅವರು ಮೇಲ್ನೋಟಕ್ಕೆ ಸಾಕ್ಷ್ಯ ನಾಶಪಡಿಸಿದ್ದಷ್ಟೇ ಅಲ್ಲದೆ ಸಾಕ್ಷಿಗಳ ಮೇಲೂ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ಮಧ್ಯಂತರ ಜಾಮೀನು ನೀಡಿದರೆ ಅದನ್ನು ಮುಂದುವರಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.