ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಚು: ಸಚಿವೆ ಅತಿಶಿ ಆರೋಪ ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ನಕಲಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಸಂಚು ಇದರಲ್ಲಿ ಅಡಗಿದೆ. ಅದರ ಸೂಚನೆಗಳು ನಮಗೆ ಸಿಕ್ಕಿವೆ. ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ದೆಹಲಿಯಲ್ಲಿ ಯಾವುದೇ ಅಧಿಕಾರಿಯ ಪೋಸ್ಟಿಂಗ್, ವರ್ಗಾವಣೆ ಆಗಿಲ್ಲ. ಅಧಿಕಾರಿಗಳು ಸರ್ಕಾರದ ಸಭೆಗಳಿಗೆ ಬರುತ್ತಿಲ್ಲ. ಕಳೆದ ವಾರ, ಲೆಫ್ಟಿನೆಂಟ್ ಗವರ್ನರ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಆಧಾರರಹಿತ ಪತ್ರ ಬರೆದು, ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯನ್ನೂ ವಜಾ ಮಾಡಿಸಿದ್ದಾರೆ. ಇವೆಲ್ಲವೂ ದೆಹಲಿ ಸರ್ಕಾರವನ್ನು ಉರುಳಿಸಲು ಮಾಡಿರುವ ಸಂಚು ಎಂದು ಅತಿಶಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವುದು ಕಾನೂನುಬಾಹಿರ, ಅಸಾಂವಿಧಾನಿಕ ಮತ್ತು ಜನರ ತೀರ್ಪಿಗೆ ವಿರುದ್ಧವಾದದ್ದು ಎಂದು ಬಿಜೆಪಿಯನ್ನು ಎಚ್ಚರಿಸಲು ಬಯಸುತ್ತೇನೆ. ದೆಹಲಿ ಜನರು ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ. 'ಕೆಲ ತಿಂಗಳಿನಿಂದ ಇಲಾಖೆಗಳಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಆದರೆ, ಯಾವುದೇ ಪೋಸ್ಟಿಂಗ್‌ಗಳು ನಡೆದಿಲ್ಲ. ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿ ಅಧಿಕಾರಿಗಳು ಮಂತ್ರಿಗಳು ಕರೆದ ಸಭೆಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಆಧಾರರಹಿತ ಪತ್ರಗಳನ್ನು ಬರೆಯುತ್ತಿದ್ದಾರೆ’ಎಂದು ಅವರು ಆರೋಪಿಸಿದ್ದಾರೆ. # | & , " . , … ../ ಆತಿಶಿ ಅವರ ಧಾಟಿಯಲ್ಲೇ ಮಾತನಾಡಿರುವ ಮತ್ತೊಬ್ಬ ಸಂಪುಟ ಸಚಿವ ಸೌರಭ್‌ ಭಾರದ್ವಾಜ್‌, ‘ಬಿಜೆಪಿ ಮತ್ತು ಲೆಫ್ಟಿನೆಂಟ್ ಗವರ್ನರ್ ದೆಹಲಿಯಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಿದ್ದಾರೆ. ಇದು ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಷಡ್ಯಂತ್ರವನ್ನು ತೋರಿಸುತ್ತದೆ’ ಎಂದು ಆಪಾದಿಸಿದರು. ‘2015 ಮತ್ತು 2020ರ ಚುನಾವಣೆಗಳಲ್ಲಿ ದೆಹಲಿಯಲ್ಲಿ ಬಿಜೆಪಿ ಎರಡು ಬಾರಿ ಸೋತಿದೆ. ತಮ್ಮಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲವೆಂಬುದು ಆ ಪಕ್ಷಕ್ಕೆ ತಿಳಿದಿದೆ. ದೆಹಲಿಯಲ್ಲಿ ಇವತ್ತು ಚುನಾವಣೆ ನಡೆದರೂ ಅರವಿಂದ ಕೇಜ್ರಿವಾಲ್ ಗೆಲ್ಲುತ್ತಾರೆ’ ಎಂದು ಅವರು ಹೇಳಿದರು. ಎಎಪಿ ನಾಯಕಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಎಎಪಿಗೆ ರಾಷ್ಟ್ರಪತಿ ಆಳ್ವಿಕೆಯ ಭಯ ಕಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.