ಶ್ರೀನಗರ: ಉಗ್ರನ ಹತ್ಯೆ ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರ‌ದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಉಗ್ರನೊಬ್ಬ ಹತ್ಯೆಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಖಚಿತ ಮಾಹಿತಿ ಮೇರೆಗೆ ದಕ್ಷಿಣ ಕಾಶ್ಮೀರ ಜಿಲ್ಲೆಯ ರಾಜ್‌ಪೋರಾ ಪ್ರದೇಶದ ಫ್ರೆಸ್ಸಿಪೋರಾ ಹಳ್ಳಿಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪಡೆಗಳ ಮೇಲೆ ಉಗ್ರ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಅವನ ಮೇಲೆ ಗುಂಡು ಹಾರಿಸಿವೆ’ ಎಂದರು. ‘ಮೃತ ಉಗ್ರನನ್ನು ದನಿಶ್‌ ಶೇಖ್‌ ಎಂದು ಗುರುತಿಸಲಾಗಿದೆ. ಈತ ಎಲ್‌ಇಟಿಯ ಉಪ ಸಂಘಟನೆಯಾದ ದಿ ರೆಸಿಸ್ಟಂಟ್‌ ಫ್ರಂಟ್‌ಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ’ ಎಂದಿದ್ದಾರೆ. ‘ಮೃತ ಉಗ್ರನ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ’ ಎಂದೂ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ನಡೆದ ಮೊದಲ ಎನ್‌ಕೌಂಟರ್‌ ಇದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.