ಸಿನಿಮಾ, ರಿಯಲ್‌ ಎಸ್ಟೇಟ್‌ನಲ್ಲಿ ಜಾಫರ್‌ ಸಾದಿಕ್‌ ಹೂಡಿಕೆ: ಇ.ಡಿ ಆರೋಪ ನವದೆಹಲಿ: ಡಿಎಂಕೆ ಪಕ್ಷದಿಂದ ವಜಾಗೊಂಡಿರುವ ಪದಾಧಿಕಾರಿ ಜಾಫರ್‌ ಸಾದಿಕ್‌ ಮಾದಕವಸ್ತು ಕಳ್ಳಸಾಗಣೆಯಿಂದ ಗಳಿಸಿದ ₹ 40 ಕೋಟಿಗೂ ಹೆಚ್ಚು ಹಣವನ್ನು ಚಲನಚಿತ್ರ ನಿರ್ಮಾಣ, ಆತಿಥ್ಯ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಆರೋಪಿಸಿದೆ. ₹ 2,000 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 3,500 ಕೆ.ಜಿ ಸೂಡೊಫೆಡ್ರಿನ್‌ ಮಾದಕವಸ್ತುವಿನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜಾಫರ್‌ ಸಾದಿಕ್‌ (36) ಅವರನ್ನು ಎನ್‌ಸಿಬಿ ಕಳೆದ ತಿಂಗಳು ಬಂಧಿಸಿತ್ತು. ಬಳಿಕ ಡಿಎಂಕೆ ಅವರನ್ನು ಪಕ್ಷದಿಂದ ವಜಾಗೊಳಿಸಿತು. ಈ ಪ್ರಕರಣದ ಸಂಬಂಧ ಏಪ್ರಿಲ್‌ 9ರಂದು ಚೆನ್ನೈ, ಮಧುರೆ ಮತ್ತು ತಿರುಚಿರಾಪಳ್ಳಿಯಲ್ಲಿ ದಾಳಿ ನಡೆಸಿದ್ದ ಇ.ಡಿ, ಈ ಕುರಿತು ಪ್ರಕಟಣೆ ಹೊರಡಿಸಿದೆ. ಸಾದಿಕ್‌ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್‌ನ ಮಾಸ್ಟರ್‌ಮೈಂಡ್‌ ಆಗಿದ್ದು, ಸೂಡೊಫೆಡ್ರಿನ್‌ ಮಾದಕವಸ್ತುವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಕಳ್ಳಸಾಗಣೆ ಮಾಡಿದ ಆರೋಪವಿದೆ ಎಂದು ಇ.ಡಿ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.