ಕಾಂಗ್ರೆಸ್ ನಾಯಕ ಅಧೀರ್‌ ರಂಜನ್‌ ಕಾರು ತಡೆದ ಯುವಕರು ಬಹರಾಂಪುರ, ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಯುವಕರ ಗುಂಪೊಂದು ಶನಿವಾರ ಇಲ್ಲಿ ತಡೆಯೊಡ್ಡಿ, ‘ಗೋ ಬ್ಯಾಕ್‌’ ಘೋಷಣೆ ಕೂಗಿದೆ. ಈ ಕೃತ್ಯಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವೇ ಹೊಣೆ ಎಂದು ಆರೋಪಿಸಿರುವ ಅಧೀರ್‌ ಅವರು, ಕಳೆದ ವರ್ಷ ನಡೆದ ಸ್ಥಳೀಯಾಡಳಿತ ಚುನಾವಣೆಯ ಬಳಿಕ ಟಿಎಂಸಿಯು ಇಂತಹ ಅಭ್ಯಾಸವನ್ನು ರೂಢಿಸಿಕೊಂಡಿದೆ ಎಂದು ದೂರಿದರು. ‘ಜನರು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಸ್ಥಳೀಯ ಟಿಎಂಸಿ ಮುಖಂಡರು ಬಯಸುವುದಿಲ್ಲ’ ಎಂದೂ ಹೇಳಿದರು. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದಾಗ ಪಾನಮತ್ತರಾದ ಯುವಕರು ಕಾರಿನ ಮುಂದೆ ಬಂದು ಘೋಷಣೆ ಕೂಗಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದೇನೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.