ಅರ್ಜಿ: ಕೇಂದ್ರ, ಅಸ್ಸಾಂ ಸರ್ಕಾರ ಪ್ರತಿಕ್ರಿಯೆಗೆ ಸುಪ್ರೀಂ ಕೋರ್ಟ್ ಸೂಚನೆ ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ–2024 (ಸಿಎಎ) ನಿಯಮಗಳನ್ನು ‍ಪ್ರಶ್ನಿಸಿ ಹೊಸದಾಗಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಹಾಗೂ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಅವರಿದ್ದ ನ್ಯಾಯಪೀಠ, ಅಸ್ಸಾಂ ಸರ್ಕಾರ, ಗೃಹ ಮತ್ತು ವಿದೇಶಾಂಗ ಸಚಿವಾಲಯಗಳಿಗೆ ನೋಟಿಸ್‌ ಜಾರಿ ಮಾಡಿತು. ಇದೇ ವಿಷಯ ಕುರಿತು ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳೊಂದಿಗೆ ಈ ಹೊಸ ಅರ್ಜಿ ಸೇರಿಸುವಂತೆಯೂ ನ್ಯಾಯಪೀಠ ಆದೇಶಿಸಿತು. ಗುವಾಹಟಿ ನಿವಾಸಿ ಹೀರೇನ್‌ ಗೋಹೇನ್‌ ಎಂಬುವವರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ‘ಸಿಎಎ ನಿಯಮಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಅವು ತಾರತಮ್ಯ ಧೋರಣೆ ಮತ್ತು ಸ್ವೇಚ್ಛೆಯಿಂದ ಕೂಡಿದ್ದು, ಕಾನೂನುಬಾಹಿರ ಸಹ ಆಗಿವೆ. ಜೊತೆಗೆ, ಸಂವಿಧಾನದ ಮೂಲ ರಚನೆಗೂ ವಿರುದ್ಧವಾಗಿವೆ’ ಎಂದು ಗೋಹೇನ್‌ ಅರ್ಜಿಯಲ್ಲಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.