ಲೋಕಸಭೆ ಚುನಾವಣೆ: ರಾಜ್‌ಕೋಟ್‌ನಲ್ಲಿ ಪರಷೋತ್ತಮ ರೂಪಾಲ–ಪರೇಶ್ ಧನಾನಿ ಮುಖಾಮುಖಿ ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿರುವ ಗುಜರಾತ್‌ನ ರಾಜ್‌ಕೋಟ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿಕೆಯಾಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಪ್ರಬಲ ಪೈಪೋಟಿಗೆ ಸಿದ್ಧರಾಗಿದ್ದಾರೆ. ಬಿಜೆಪಿಯು ಈ ಬಾರಿ ಕೇಂದ್ರ ಸಚಿವ ಪರಷೋತ್ತಮ ರೂಪಾಲ ಅವರನ್ನು ಸ್ಪರ್ಧೆಗಿಳಿಸಿದೆ. ರಾಜ್ಯಸಭಾ ಸದಸ್ಯರಾಗಿರುವ ರೂಪಾಲ, ಈ ಸಲ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಇಲ್ಲಿಂದ ಬಿಜೆಪಿಯ ಮೋಹನ್‌ ಕುಂದರಿಯಾ ಅವರು ಗೆದ್ದಿದ್ದರು. ರೂಪಾಲ ಅವರು ಈಚೆಗೆ ರಜಪೂತರ ಕುರಿತು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಇವರು ಕ್ಷಮೆ ಯಾಚಿಸಿದ್ದರೂ ರಜಪೂತರ ಸಿಟ್ಟು ಶಮನವಾಗಿಲ್ಲ. ಇವರನ್ನು ಅಭ್ಯರ್ಥಿಯಾಗಿಸಬಾರದು ಎಂದು ಈ ಸಮುದಾಯದ ಒಂದು ವಿಭಾಗ ಆಗ್ರಹಿಸಿತ್ತು. ಈ ನಡುವೆ ಪಾಟೀದಾರ್ ಸಮುದಾಯದವರು ರೂಪಾಲ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಪರಷೋತ್ತಮ ರೂಪಾಲ ಅವರೊಂದಿಗೆ ಸೆಣಸಲು ಕಾಂಗ್ರೆಸ್‌, ಗುಜರಾತ್‌ ವಿಧಾನಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಪರೇಶ್ ಧನಾನಿ ಅವರನ್ನು ಅಖಾಡಕ್ಕಿಳಿಸಿದೆ. ಧನಾನಿ, 2002ರಲ್ಲಿ ಅಮ್ರೇಲಿ ವಿಧಾನಸಭಾ ಕ್ಷೇತ್ರದಿಂದ ರೂಪಾಲ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು. ರೂಪಾಲ ಅವರು ರಜಪೂತರ ಕೆಂಗಣ್ಣಿಗೆ ಗುರಿಯಾಗಿರುವುದರಿಂದ ಈ ಬಾರಿ ಧನಾನಿ ಗೆಲ್ಲಬಹುದೆಂಬ ವಿಶ್ವಾಸ ಕಾಂಗ್ರೆಸ್‌ ವರಿಷ್ಠರದ್ದಾಗಿದೆ. ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐ ಮೂಲಕ ರಾಜಕೀಯ ಪ್ರವೇಶಿಸಿದ್ದ ಧನಾನಿ, ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ. ಧನಾನಿ ಅವರು ಪಾಟೀದಾರ್‌ ಸಮುದಾಯದ ಉಪ ಜಾತಿಯಾದ ಲೇವಾ ಪಟೇಲ್‌ಗೆ ಸೇರಿದವರಾಗಿದ್ದು, ಈ ಸಮುದಾಯದವರು ಈ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಬ್ಬರು ಪ್ರಬಲ ಅಭ್ಯರ್ಥಿಗಳಲ್ಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.