ಲೋಕಸಭೆ ಚುನಾವಣೆ | ಗುಜರಾತ್‌: ಸೋನಿಯಾ, ರಾಹುಲ್‌, ಖರ್ಗೆ ತಾರಾ ಪ್ರಚಾರಕರು ಅಹಮದಾಬಾದ್‌: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 40 ಮಂದಿಯನ್ನು ಗುಜರಾತ್‌ನಲ್ಲಿ ಪ್ರಚಾರ ನಡೆಸಲು ಪಕ್ಷವು ತಾರಾ ಪ್ರಚಾರಕರನ್ನಾಗಿ ಹೆಸರಿಸಿದೆ. ಪಕ್ಷದ ಗುಜರಾತ್‌ ರಾಜ್ಯ ಘಟಕವು ತಾರಾ ಪ್ರಚಾರಕರ ಪಟ್ಟಿಯನ್ನು ಮಂಗಳವಾರ ಹಂಚಿಕೊಂಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ರಾಜಸ್ಥಾನ ಶಾಸಕ ಸಚಿನ್‌ ಪೈಲಟ್‌ ಅವರ ಹೆಸರುಗಳು ಕೂಡ ತಾರಾ ಪ್ರಚಾರಕರ ಪಟ್ಟಿಯಲ್ಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಖಂಡರಾದ ಕೆ.ಸಿ. ವೇಣುಗೋಪಾಲ್‌, ಮುಕುಲ್‌ ವಾಸ್ನಿಕ್‌ ಮತ್ತಿತರೂ ಇಲ್ಲಿ ಪ್ರಚಾರ ನಡೆಸುವರು ಎಂದಿವೆ. ಮೇ7ರಂದು ಗುಜರಾತ್‌ನ ಎಲ್ಲಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. 26 ಕ್ಷೇತ್ರಗಳ ಪೈಕಿ 23ರಲ್ಲಿ ಕಾಂಗ್ರೆಸ್‌ ಹಾಗೂ ಎರಡು ಕ್ಷೇತ್ರಗಳಲ್ಲಿ ‘ಇಂಡಿಯಾ’ ಒಕ್ಕೂಟದ ಜೊತೆಗಿರುವ ಎಎಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸೂರತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ನಾಮ‍ಪತ್ರ ಈಚೆಗೆ ತಿರಸ್ಕೃತಗೊಂಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.