ಬಿಎಸ್‌ಪಿ ಬಿಜೆಪಿಯ ಬಿ ಟೀಂ: ಡ್ಯಾನಿಶ್‌ ಅಲಿ ನವದೆಹಲಿ/ ಅಮ್ರೋಹಾ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಎಸ್‌ಪಿಯು ಬಿಜೆಪಿಯ ಬಿ ಟೀಂನಂತೆ ಕೆಲಸ ಮಾಡುತ್ತಿದೆ. ಅಲ್ಲದೇ ಬಿಎಸ್‌ಪಿಯ ಅಭ್ಯರ್ಥಿಗಳನ್ನು ಕೇಂದ್ರದ ಆಡಳಿತಾರೂಢ ಪಕ್ಷವೇ ನಿರ್ಧರಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ಡ್ಯಾನಿಶ್‌ ಅಲಿ ಮಂಗಳವಾರ ಆರೋಪಿಸಿದ್ದಾರೆ. ‘ಅಮ್ರೋಹಾದಲ್ಲಿ ಕಳೆದ ವಾರ ನಡೆದ ಬಿಜೆಪಿ ರ್‍ಯಾಲಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಟೀಕಿಸಿದ್ದು ನೋಡಿದರೆ ಅವರೆಷ್ಟು ಹತಾಶರಾಗಿದ್ದಾರೆ ಎಂಬುದು ತಿಳಿಯುತ್ತದೆ’ ಎಂದಿದ್ದಾರೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತ್ಯಜಿಸಿದ ಬಳಿಕ, ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಡ್ಯಾನಿಶ್‌ ಅವರು, ಪ್ರಸ್ತುತ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ‘ಕಳೆದ ಎರಡು ವಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಮ್ರೋಹಾಗೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಬಿಜೆಪಿ ನಾಯಕರ ದಂಡೇ ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಿದೆ. ಆದರೆ ನಾನು ಈ ಚುನಾವಣೆಯನ್ನು ಒಂದು ಸವಾಲಾಗಿ ಸ್ವೀಕರಿಸುತ್ತೇನೆ’ ಎಂದು ಡ್ಯಾನಿಶ್‌ ಪ್ರತಿಪಾದಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.