ಪಕ್ಷೇತರ ಅಭ್ಯರ್ಥಿಯ ಚಿಹ್ನೆ: ಚುನಾವಣಾ ಆಯೋಗಕ್ಕೆ ಎನ್‌ಸಿಪಿ ಪವಾರ್‌ ಬಣ ದೂರು ಪುಣೆ: ಪಕ್ಷದ ಭದ್ರಕೋಟೆಯಾದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿಗೆ ಕಹಳೆಯನ್ನು ಹೋಲುವಂತಹ ವಾದ್ಯವನ್ನು ಚಿಹ್ನೆಯಾಗಿ ನೀಡಿರುವುದರ ವಿರುದ್ಧ ಚುನಾವಣೆ ಆಯೋಗಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಶರದ್‌ಚಂದ್ರ ಪವಾರ್‌ ಬಣ) ದೂರು ಸಲ್ಲಿಸಿದೆ. ‘ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಶೇಖ್‌ ಸೋಯಲ್‌ಶಾ ಯೂನಸ್‌ ಶಾ ಎಂಬುವವರಿಗೆ ಪಕ್ಷದ ಚಿಹ್ನೆ ಕಹಳೆಯನ್ನೇ ಹೋಲುವಂತಹ ವಾದ್ಯವನ್ನು ಚಿಹ್ನೆಯಾಗಿ ನೀಡಲಾಗಿದೆ. ಇದನ್ನು ‘ತುತೂರಿ’ ಎಂದು ಕರೆಯಲಾಗಿದೆ’ ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ಎನ್‌ಸಿಪಿ (ಎಸ್‌ಪಿ) ತಿಳಿಸಿದೆ. ಬಾರಾಮತಿ ಕ್ಷೇತ್ರದ ಎನ್‌ಸಿಪಿ(ಎಸ್‌ಪಿ) ಅಭ್ಯರ್ಥಿ ಸುಪ್ರಿಯಾ ಸುಳೆ ಅವರ ಚುನಾವಣಾ ಏಜೆಂಟ್ ಲಕ್ಷ್ಮೀಕಾಂತ ಖಬಿಯಾ ಎಂಬುವವರು ಏಪ್ರಿಲ್‌ 20ರಂದು ದೂರು ಸಲ್ಲಿಸಿದ್ದಾರೆ. ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಆಯೋಗವು ಎನ್‌ಸಿಪಿ(ಎಸ್‌ಪಿ)ಗೆ ಹಂಚಿಕೆ ಮಾಡಿದೆ. ‘ನಮ್ಮ ಪಕ್ಷಕ್ಕೆ ಹಾಗೂ ಸ್ವತಂತ್ರ ಅಭ್ಯರ್ಥಿಗೆ ನೀಡಿರುವ ಚಿಹ್ನೆಗಳಿಗೆ ಮರಾಠಿಯಲ್ಲಿ ಒಂದೇ ಹೆಸರಿನಿಂದ ಕರೆಯಲಾಗುವುದರಿಂದ ಇದು ಮತದಾರರಲ್ಲಿ ಗೊಂದಲ ಮೂಡಿಸುತ್ತದೆ. ಹೀಗಾಗಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ದೂರುದಾರ ಲಕ್ಷ್ಮೀಕಾಂತ ಖಬಿಯಾ ಹೇಳಿದ್ದಾರೆ. ಈ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.