ಜಮ್ಮು: ಸರ್ಕಾರಿ ನೌಕರನ ಹತ್ಯೆ; ವಿದೇಶಿ ಉಗ್ರನ ಕೈವಾಡ,ಸುಳಿವಿಗೆ ₹10 ಲಕ್ಷ ಇನಾಮು ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರನ ಹತ್ಯೆಯಲ್ಲಿ ನಿಷೇಧಿತ ಲಷ್ಕರ್‌–ಎ–ತಯಬಾ ಸಂಘಟನೆಯ ಅಬು ಹಮ್ಜಾ ಎಂಬ ಸಂಕೇತನಾಮದ ವಿದೇಶಿ ಉಗ್ರನ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಉಗ್ರನ ಬಗ್ಗೆ ಸುಳಿವು ನೀಡಿದವರಿಗೆ ₹10 ಲಕ್ಷ ಇನಾಮು ಘೋಷಿಸಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ಮೊಹಮ್ಮದ್ ರಜಾಕ್ (40) ಅವರನ್ನು ಥಾನಮಂಡಿ ಪ್ರದೇಶದ ತಪ್ಪಲಿನ ಕುಂದಾ ಗ್ರಾಮದಲ್ಲಿ ಸೋಮವಾರ ಹತ್ಯೆಗೈಯಲಾಗಿತ್ತು. ರಜಾಕ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನೆರವೇರಿಸಲಾಯಿತು. ಇಬ್ಬರು ಉಗ್ರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ರಜಾಕ್ ಅವರ ಸಹೋದರ ಮೊಹಮ್ಮದ್ ತಾಹೀರ್ ಚೌಧರಿ ಯೋಧರಾಗಿದ್ದು, ದಾಳಿಯಿಂದ ಪಾರಾಗಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ. ಥಾನಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.