ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಸುಪ್ರೀಂ ಕೋರ್ಟ್‌ ತೀರ್ಪು ಇಂದು ನವದೆಹಲಿ: ಮತ ಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ– ಪ್ಯಾಟ್‌ನಲ್ಲಿನ ಮತಗಳನ್ನು ಹೋಲಿಸಿ ನೋಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಲಿದೆ. ನ್ಯಾಯಾಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತ ಅವರನ್ನು ಒಳಗೊಂಡ ನ್ಯಾಯಪೀಠವು ತೀರ್ಪು ನೀಡಲಿದೆ. ಬುಧವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ‘ಮತ ಯಂತ್ರಗಳಿಗೆ ಸಂಬಂಧಿಸಿದ ಸಂದೇಹದ ಮೇಲೆ ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅಥವಾ ಚುನಾವಣೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿತ್ತು. ಅರ್ಜಿದಾರರಲ್ಲಿ ಒಬ್ಬರಾಗಿರುವ ಅಸೋಷಿಯೇಷನ್‌ ಫಾರ್‌ ಡೆಮಾಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆಯು, ಮತಯಂತ್ರಗಳಲ್ಲಿನ ಪಾರದರ್ಶಕ ಗಾಜಿನ ಬದಲು ಅಪಾರದರ್ಶಕ ಗಾಜನ್ನು ಅಳವಡಿಸುವ ಆಯೋಗದ 2017ರ ನಿರ್ಧಾರವನ್ನು ಕೈಬಿಡುವಂತೆ ಹಾಗೂ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸುವ ಪದ್ಧತಿಯನ್ನೆ ಜಾರಿಗೆ ತರುವಂತೆ ಮನವಿ ಮಾಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.