ಕುಡಿದು ಅಮ್ಮನಿಗೆ ಹೊಡೆಯುತ್ತಿದ್ದ ಅಪ್ಪನ ನಡವಳಿಕೆಗೆ ನೊಂದು ಬಾಲಕಿ ಆತ್ಮಹತ್ಯೆ ಖಾರ್‌ಗೋನ್‌: ಮದ್ಯಪಾನ ಮಾಡಿ ತಾಯಿಗೆ ಥಳಿಸುತ್ತಿದ್ದ ತಂದೆಯ ವರ್ತನೆಯಿಂದ ನೊಂದು 17 ವರ್ಷದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಖಾರ್‌ಗೋನ್‌ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾವತ್‌ ಪಲಾಸಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದಾಗಿ ಬರ್ವಾ ಪೊಲೀಸ್‌ ಠಾಣೆಯ ಉಸ್ತುವಾರಿ ನಿರ್ಮಲ್ ಶ್ರೀನಿವಾಸ್ ತಿಳಿಸಿದ್ದಾರೆ. ಪತ್ರ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ‘ನನ್ನ ತಂದೆ ನಿತ್ಯ ಕುಡಿದು ಬಂದು ತಾಯಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ಹೇಳಿದ್ದಾಳೆ. ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪವನ್ನು ನಿರಾಕರಿಸಿರುವ ನಿರ್ಮಲ್, ದೂರು ಬಂದ ಬಳಿಕ ಅವರಿಂದ ಮುಚ್ಚಳಿಕೆ ಬರೆಯಿಸಿ ಕಳುಹಿಸಿದ್ದೆವು ಎಂದು ಹೇಳಿದ್ದಾರೆ. ಈ ಹಿಂದೆ ದೂರು ನೀಡಿದಾಗ ಪೊಲೀಸರು ಬಾಲಕಿಯ ತಂದೆಯನ್ನು ಬಂಧಿಸಿದ್ದರು. ಈಗ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಾರ್‌ಗೋನ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ ತಿಳಿಸಿದ್ದಾರೆ. ಮೃತ ಬಾಲಕಿಯ ಕಿರಿಯ ಸಹೋದರಿ ಕೂಡ ತಂದೆ ಕುಡಿದು ಬಂದು ತಾಯಿಗೆ ಹೊಡೆಯುತ್ತಿದ್ದರೆಂದೂ, ಹಲವು ಬಾರಿ ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲವೆಂದೂ ದೂರಿದ್ದಾರೆ. ತಂದೆಯ ಈ ನಡವಳಿಕೆಯಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.