ಮೂಲಕ ಮಹಿಳೆಯರಿಗೂ ಅವಕಾಶ: 8 ವಾರದಲ್ಲಿ ನಿರ್ಧರಿಸುವಂತೆ ಕೇಂದ್ರಕ್ಕೆ ಆದೇಶ ನವದೆಹಲಿ: ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಹುದ್ದೆಗಳಿಗೆ ಸೇರಲು ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (ಸಿಡಿಎಸ್‌) ಮೂಲಕ ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ, ಎಂಟು ವಾರಗಳಲ್ಲಿ ನಿರ್ಧಾರ ಪ್ರಕಟಿಸಬೇಕೆಂದು ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಆದೇಶಿಸಿದೆ. 2023ರ ಡಿಸೆಂಬರ್‌ನಲ್ಲಿ ಭಾರತೀಯ ಭೂಸೇನೆ ಅಕಾಡೆಮಿ (ಐಎಂಎ), ನೌಕಾಸೇನೆ ಅಕಾಡೆಮಿ (ಐಎನ್‌ಎ), ವಾಯುಸೇನೆ ಅಕಾಡೆಮಿ (ಐಎಫ್‌) ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿಗಳಿಗೆ (ಒಟಿಎ) ಸಿಡಿಎಸ್‌ ಮೂಲಕ ಪರೀಕ್ಷೆ ನಡೆಸಲಿರುವ ಅಧಿಸೂಚನೆಯನ್ನು ಯುಪಿಎಸ್‌ಸಿ ಹೊರಡಿಸಿತ್ತು. ಅಧಿಸೂಚನೆಯನ್ನು ಪ್ರಶ್ನಿಸಿ ಖುಶ್‌ ಕಾಲ್ರಾ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಈ ಆದೇಶ ಹೊರಡಿಸಿದೆ. ಇದೇ ವಿಷಯದಲ್ಲಿ ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿರುವ ಅಹವಾಲು ಇನ್ನೂ ಇತ್ಯರ್ಥವಾಗಿಲ್ಲ ಎಂಬುದನ್ನೂ ಪರಿಗಣನೆಗೆ ತೆಗೆದುಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌. ಅರೋರಾ ಅವರಿದ್ದ ಪೀಠವು, ‘ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಕಾನೂನಿನ ಅನುಸಾರವಾಗಿ ಎಂಟು ವಾರಗಳಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಬೇಕು’ ಎಂದು ಆದೇಶ ನೀಡಿ, ಅರ್ಜಿಯನ್ನು ವಿಲೇವಾರಿ ಮಾಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.